ರಸ್ತೆಗುಂಡಿಗಳನ್ನು ಮುಚ್ಚದ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖ ನಾಯಕರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೋಂಡಿದ್ದರು.
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಅಲಸೂರು, ಶಾಂತಿನಗರ, ಶಿವಾಜಿನಗರ ಮಹಾದೇವಪುರ ಸೇರಿದಂತೆ ಹಲವು ಬಡಾವಣೆಗಳ ರಸ್ತೆಗಳಲ್ಲಿರುವ ಗುಂಡಿಗಳಿಗೆ ಬಣ್ಣ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿದರು.ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂಗಳಾದ ಕೆ.ಎಸ್ ಈಶ್ವರಪ್ಪ, ಆರ್ ಅಶೋಕ್ ಮತ್ತು ಯಡಿಯೂರಪ್ಪ ರಸ್ತೆಯಲ್ಲಿನ ಗುಂಡಿಗಳಿಗೆ ಬಣ್ಣ ಹಚ್ಚಿದರು.
ಮುರಿದ ಕುರ್ಚಿ ಮೇಲೆ ಸಿಎಂ ಎಂದು ಬರೆದು ಕೆಲವು ಗುಂಡಿಗಳ ಮೇಲೆ ಇಟ್ಟರು, ಇನ್ನೂ ಕೆಲವು ಗುಂಡಿಗಳ ಮೇಲೆ ಗಿಡ ಗಳನ್ನು ನೆಡುವ ಮೂಲಕ ಸರ್ಕಾರವನ್ನು ಟೀಕಿಸಿದರು.
ರಸ್ತೆ ಸೇರಿದಂತೆ ಬೆಂಗಳೂರು ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 8,000 ದಿಂದ 10,000 ಕೋಟಿ ರು ವ್ಯಯಿಸಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರ ನಿಜವಾಗಿಯೂ ಅಷ್ಟು ಹಣ ಖರ್ಚು ಮಾಡಿ ವೈಜ್ಞಾನಿಕವಾಗಿ ಕೆಲಸ ಮಾಡಿದ್ದರೇ ಮಳೆ ಬಂದಾಗ ಬೆಂಗಳೂರಿಗೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಉತ್ತಮ ರಸ್ತೆ ನಿರ್ಮಾಣ ಮಾಡುವುದು ದೊಡ್ಡ ಕೆಲಸವಲ್ಲ ಎಂದು ತಿಳಿಸಿದ್ದಾರೆ.
ಉತ್ತಮ ಒಳಚರಂಡಿ ವ್ಯವಸ್ಥೆ, ಸಂಸ್ಕರಣಾ ಘಟಕಗಳನ್ನು ಸರಿಯಾಗಿ ನಿರ್ಮಿಸಿದ್ದರೇ ರಸ್ತೆಗಳಿಗೆ ಹಾನಿಯಾಗುತ್ತಿರಲಿಲ್ಲ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ.
ರಸ್ತೆಗಳ ದುಸ್ಥಿತಿ ಹಾಗೂ ಗುಂಡಿಗಳಿಗೆ ಬಲಿಯಾದವರ ಬಗ್ಗೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ, ಸಾವಿಗೆ ರಸ್ತೆಯ ಗುಂಡಿಗಳು ಕಾರಣವಲ್ಲ ಎಂಬ ಹೇಳಿಕೆ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆಜಾರ್ಜ್ ವಿರುದ್ಧ ಟೀಕಿಸಿದರು.