ಬೆಂಗಳೂರು: ಬಿಜೆಪಿಗೆ ಪ್ರತಿಯಾಗಿ ವಿಧಾನಸಭೆ ಚುನಾವಣೆಗೆ ಪ್ರಚಾರ ಕಾರ್ಯತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ನವೆಂಬರ್ ತಿಂಗಳಲ್ಲಿ ಎರಡು ಪ್ರತ್ಯೇಕ ಯಾತ್ರೆಗಳನ್ನು ನಡೆಸಲಿದೆ. ಬಿಜೆಪಿ ನವೆಂಬರ್ 2ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನವ ಕರ್ನಾಟಕ ಪರಿವಾರ ಯಾತ್ರೆಯನ್ನು ಆರಂಭಿಸಲಿದೆ.
ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಇತರ ನಾಯಕರು ಚರ್ಚೆ ನಡೆಸಿದರು. ಸಿದ್ದರಾಮಯ್ಯ ಸರ್ಕಾರದ ಸಾಧನೆಗಳು ಮತ್ತು ಮೋದಿ ಸರ್ಕಾರದ ವೈಫಲ್ಯವನ್ನು ರಾಜ್ಯದ ಜನತೆ ಮುಂದೆ ತೋರಿಸಲು ಸಾಮೂಹಿಕ ಸಂಪರ್ಕ ಅಭಿಯಾನವನ್ನು ಆರಂಭಿಸುವಂತೆ ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಸಲಹೆ ನೀಡಿದರು,
ನವೆಂಬರ್ ನಲ್ಲಿ ನಾವು ಎರಡು ಪ್ರತ್ಯೇಕ ಯಾತ್ರೆಗಳನ್ನು ನಡೆಸಲು ನಿರ್ಧರಿಸಿದ್ದೇವೆ. ಒಂದು ಕಾಂಗ್ರೆಸ್ ಪಕ್ಷದಿಂದ ಮತ್ತು ಇನ್ನೊಂದು ಸರ್ಕಾರದಿಂದ. ಸಿದ್ದರಾಮಯ್ಯ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಯಾತ್ರೆಯಲ್ಲಿ ತೋರಿಸಲಾಗುವುದು. ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಸುಮಾರು 1.2 ಕೋಟಿ ಕಿರು ಪುಸ್ತಕಗಳನ್ನು ಯಾತ್ರೆ ಸಂದರ್ಭದಲ್ಲಿ ಹಂಚಲಾಗುವುದು. ಯಾತ್ರೆಯ ದಿನಾಂಕಗಳನ್ನು ಸದ್ಯದಲ್ಲಿಯೇ ನಿರ್ಧರಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತಮ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆಯನ್ನು ಎದುರಿಸಬೇಕೆಂದು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು. ರಾಹುಲ್ ಗಾಂಧಿ ಜೊತೆಗಿನ ಸಭೆಯಲ್ಲಿ ನಾಯಕರು ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು. ಆದರೆ ಯಾರ್ಯಾರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕೆಂಬ ಬಗ್ಗೆ ನಿರ್ಧಾರವಾಗಿಲ್ಲ ಎಂದರು.