ಬೆಂಗಳೂರು: ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪವನ್ನು ನಿರಾಕರಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಆರೋಪ ಸಾಬೀತಾದರೆ ಸಾರ್ವಜನಿಕ ಸೇವೆಯಿಂದ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನಲ್ಲಿ ಬೆಂಗಳೂರಿನಿಂದ ಕೇರಳದ ಆಲೆಪ್ಪಿಗೆ ರಾಜ್ಯ ಬಸ್ ಸೇವೆಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 40 ವರ್ಷಗಳಿಂದ ನಾನು ಸಾರ್ವಜನಿಕ ಜೀವನದಲ್ಲಿದ್ದೇನೆ. ಒಂದೇ ಒಂದು ಕಳಂಕವೂ ಇಲ್ಲ. ವಿರೋಧ ಪಕ್ಷದವರು ಈ ಆರೋಪವನ್ನು ಬಹಳ ಸಮಯಗಳಿಂದ ಮಾಡುತ್ತಾ ಬಂದಿದ್ದಾರೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ನಿಂತಾಗ ಈ ಆರೋಪ ಹೆಚ್ಚಾಯಿತು. ತಮ್ಮ ವಿರುದ್ಧವೇ 36 ಕೇಸುಗಳು ದಾಖಲಾಗಿರುವ ಮಹಿಳೆ ಲೈಂಗಿಕ ಕಿರುಕುಳ ಕೇಸನ್ನು ನನ್ನ ವಿರುದ್ಧ ದಾಖಲಿಸಿದ್ದಾರೆ. ನಾನು ಕೂಡ ಎರ್ನಾಕುಲಂ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಕೇಸನ್ನು ದಾಖಲಿಸಿದ್ದೇನೆ. ನಾನು ತಪ್ಪಿತಸ್ಥ ಎಂದು ಸಾಬೀತಾದರೆ ಸಾರ್ವಜನಿಕ ಜೀವನದಿಂದ ನಿವೃತ್ತನಾಗುತ್ತೇನೆ ಎಂದು ಹೇಳಿದರು.
ಸೋಲಾರ್ ಹಗರಣ ಕುರಿತು ಕೇರಳದಲ್ಲಿ ಎಡರಂಗ ಸರ್ಕಾರ ತನಿಖೆ ನಡೆಸಲು ಆದೇಶ ನೀಡಿರುವುದು ಮತ್ತು ಮುಖ್ಯ ಆರೋಪಿ ಸರಿತಾ ನಾಯರ್ ಬರೆದ ಪತ್ರದ ಅನ್ವಯ ದೂರು ದಾಖಲಿಸಿರುವುದು ಕಾಂಗ್ರೆಸ್ ನಲ್ಲಿ ಭೀತಿಯನ್ನು ಮೂಡಿಸಿದೆ. ಪತ್ರದಲ್ಲಿ ವೇಣುಗೋಪಾಲ್ ಸೇರಿದಂತೆ ರಾಜ್ಯದ ಅನೇಕ ಕಾಂಗ್ರೆಸ್ ಹಿರಿಯ ನಾಯಕರ ಹೆಸರಿದೆ ಎನ್ನಲಾಗಿದೆ.
ಈ ಸಂದರ್ಭವನ್ನು ಬಳಸಿಕೊಂಡು ಬಿಜೆಪಿ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಕರ್ನಾಟಕದಲ್ಲಿ ಉಡುಪಿ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಬಿಜೆಪಿ ಮಹಿಳಾ ವಿಭಾಗ ಕಿರುಕುಳ ನೀಡುವವರನ್ನು ರಾಜ್ಯದಿಂದ ಓಡಿಸಿ ಎಂದು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಚಿವ ರೋಷನ್ ಬೇಗ್ ಬಳಸಿದ ಅವಾಚ್ಯ ಮಾತುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ವೇಣುಗೋಪಾಲ್, ಬಿಜೆಪಿ ನಾಯಕರು ಇದಕ್ಕಿಂತಲೂ ಕೆಟ್ಟ ಶಬ್ದಗಳನ್ನು ಬಳಸುತ್ತಾರೆ. ರೋಷನ್ ಬೇಗ್ ಈ ಶಬ್ದಗಳನ್ನು ಉದ್ದೇಶಪೂರ್ವಕವಾಗಿ ಬಳಸಿದ್ದು ಖಂಡಿತಾ ಆಗಿರಲಿಕ್ಕಿಲ್ಲ. ಈ ಬಗ್ಗೆ ಅವರು ಈಗಾಗಲೇ ಸ್ಪಷ್ಟನೆ ಕೂಡ ನೀಡಿದ್ದಾರೆ. ಆದರೆ ಅಂತಹ ಶಬ್ದಗಳನ್ನು ಬಳಸುವುದು ಸರಿಯಲ್ಲ ಎಂದು ವೇಣುಗೋಪಾಲ್ ಒಪ್ಪಿಕೊಂಡಿದ್ದಾರೆ.