ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಧಿಕೃತವಾಗಿಲ್ಲ, ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಪಟ್ಟಿ ಅದು ನಕಲಿ ಪಟ್ಟಿ ಎಂದು ಕಾಂಗ್ರೆಸ್ ಸ್ಪಷ್ಟನೆ ನಿಡಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಎನ್ನುವುದಾಗಿ ಬಿಂಬಿಸುವ 131 ಅಭ್ಯರ್ಥಿಗಳ ಪಟ್ಟಿ ಮಂಗಳವಾರ ಸಂಜೆಯಿಂದ ಸಾಮಾಜಿಕ ತಾಣ ವಾಟ್ಸ್‌ಆ್ಯಪ್ ಸೇರಿ ಅನೇಕ ಕಡೆ ಹರಿದಾಡುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಕೆಲ ಕಾಲ ಗೊಂದಲ ಏರ್ಪತ್ಟಿತ್ತು.
ಆದರೆ ಈ ಪಟ್ಟಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಟ್ವೀಟ್ ಮಾಡಿದ್ದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವುದು ನಕಲಿ ಪಟ್ಟಿ, ಗೊಂದಲ ಹುಟ್ಟಿಸಲಿಕ್ಕಾಗಿ ಇದನ್ನು ಸೃಷ್ಟಿಸಲಾಗಿದೆ. ಅಭ್ಯರ್ಥಿಗಳ ಅಂತಿಮ ಪಟ್ಟಿಗೆ ಎಐಸಿಸಿ ಇನ್ನೂ ಅನುಮೋದನೆ ನೀಡಿಲ್ಲ. ಸುಲ್ಳು ಸುದ್ದಿಗಳನ್ನು ನಂಬಬೇಡಿ ಎಂದು ಸ್ಪಷ್ಟನೆ ನಿಡಿದ್ದಾರೆ.
ಅಲ್ಲದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸಹ ಪ್ರಕಟಣೆ ಹೊರಡಿಸಿದ್ದು ಪಕ್ಷವು ಇದುವರೆವಿಗೆ ಯಾವುದೇ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಮುಗಿದಿದೆಯಷ್ಟೇ, ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಬೇಕಿದೆ. ನಂತರವೇ ಅಧಿಕೃತ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದಿದ್ದಾರೆ.