ಬೆಂಗಳೂರು: ನಿರೀಕ್ಷೆಯಂತೆಯೇ ಜೆಡಿಎಸ್ ಪಕ್ಷದ ರೆಬೆಲ್ ಶಾಸಕರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಣೆ ಮಾಡಿದ್ದು, ದಾವಣಗೆರೆ ದಕ್ಷಿಣದಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರು ಟಿಕೆಟ್ ಪಡೆದಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ರಂಗೇರಿದ್ದು, ನಿರೀಕ್ಷೆಯಂತೆಯೇ ಜೆಡಿಎಸ್ ನ ರೆಬೆಲ್ ಶಾಸಕರಿಗೆ ಕಾಂಗ್ರೆಸ್ ಪಕ್ಷ ಮಣೆ ಹಾಕಿದೆ. ಚಾಮರಾಜಪೇಟೆ ಕ್ಷೇತ್ರದಿಂದ ಮಾಜಿ ಶಾಸಕ ಜಮೀರ್ ಅಹ್ಮದ್ ಖಾನ್, ಮಾಗಡಿಯಿಂದ ಹೆಚ್ ಸಿ ಬಾಲಕೃಷ್ಣ ಮತ್ತು ನಾಗಮಂಗಲ ಕ್ಷೇತ್ರದಿಂದ ಚೆಲುವರಾಯಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.
ಅಂತೆಯೇ ತೀವ್ರ ವಿರೋಧದ ನಡುವೆಯೇ ಬೀದರ್ ದಕ್ಷಿಣ ಕ್ಷೇತ್ರದಿಂದ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ವಯಸ್ಸಿನ ಆಧಾರದ ಮೇಲೆ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಲಾಗುವುದಿಲ್ಲ ಎಂದು ಹೇಳಲಾಗಿತ್ತಾದರೂ, ಕೊನೆ ಕ್ಷಣದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಲಾಗಿದೆ.
ಇನ್ನು ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕೋಲಾರ ಕ್ಷೇತ್ರದಲ್ಲಿ ಸೈಯದ್ ಜಮೀರ್ ಪಾಷಾ ಅವರಿಗೆ ಟಿಕೆಟ್ ನೀಡಲಾಗಿದೆ. ಕೋಲಾರ ಕ್ಷೇತ್ರದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ವಿಆರ್ ಸುದರ್ಶನ್ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟೆಕಿಟ್ ಕೈ ತಪ್ಪಿದ್ದಕ್ಕೆ ಸುದರ್ಶನ್ ತಮ್ಮ ಸ್ಥಾನಕ್ಕೆ ನಿನ್ನೆಯಷ್ಟೇ ರಾಜಿನಾಮೆ ನೀಡಿದ್ದರು.