ರಾಜಕೀಯ

ರಾಜಕಾರಣಿಗಳಲ್ಲಿ ಶಿಸ್ತು, ಪ್ರಾಮಾಣಿಕತೆ ತರಲು ರಾಜಕೀಯ ಪ್ರವೇಶ: ಅನುಪಮಾ ಶೆಣೈ

Lingaraj Badiger
ಬೆಂಗಳೂರು: ಭರವಸೆ ನೀಡಿ ಈಡೇರಿಸದ ರಾಜಕಾರಣಿಗಳಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆ ತರಲು ನಾನು ರಾಜಕೀಯ ಪ್ರವೇಶಿಸಿದ್ದೇನೆ ಎಂದು ಮಾಜಿ ಪೊಲೀಸ್ ಅಧಿಕಾರಿ ಹಾಗೂ ಭಾರತೀಯ ಜನಶಕ್ತಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅನುಪಮಾ ಶೆಣೈ ಅವರು ಮಂಗಳವಾರ ಹೇಳಿದ್ದಾರೆ.
ಮೇ 12ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಕ್ಕಾಗಿಯೇ ನಾನು ರಾಜಕೀಯ ಪಕ್ಷ ಸ್ಥಾಪಿಸಿದ್ದೇನೆ ಎಂದು ಅನುಪಮಾ ಶೆಣೈ ಅವರು ಐಎಎನ್ ಎಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 
ರಾಜ್ಯದಲ್ಲಿ ಹೊಸ ನಾಯಕತ್ವ ಸೃಷ್ಟಿಸುವುದಕ್ಕಾಗಿ ನಾನು ರಾಜಕೀಯ ಪ್ರವೇಶಿಸಿದ್ದೇನೆ. ರಾಜ್ಯದ ಮೂರು ರಾಜಕೀಯ ಪಕ್ಷಗಳಲ್ಲಿ ಯುವಕರಿಗೆ ಬೆಳೆಯಲು ಯಾವುದೇ ಅವಕಾಶ ಇಲ್ಲ. ನಮ್ಮ ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತ ನೀಡಲಾಗುವುದು ಎಂದಿದ್ದಾರೆ.
ನಮ್ಮ ಪಕ್ಷ ರಾಜ್ಯದ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಬೆಂಗಳೂರಿನ ಏಳು-ಎಂಟು ಕ್ಷೇತ್ರಗಳಲ್ಲಿ, ವಿಜಯಪುರದ ಮೂರು ಕ್ಷೇತ್ರಗಳಲ್ಲಿ, ಬಾಗಲಕೋಟೆ, ಕಲಬುರ್ಗಿ, ಮೈಸೂರು ಮತ್ತು ಉಡುಪಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಹಾಗೂ ಇತರೆ ಜಿಲ್ಲೆಗಳಲ್ಲೂ ಭಾರತೀಯ ಜನಶಕ್ತಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಅನುಪಮಾ ಹೇಳಿದ್ದಾರೆ.
ನಾನು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮಾಜಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರಾಜ್ಯದ 224 ಕ್ಷೇತ್ರಗಳಿಗೆ ಮೇ 12ರಂದು ಮತದಾನ ನಡೆಯಲಿದ್ದು, ಮೇ 15ಕ್ಕೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ.
SCROLL FOR NEXT