ಬೆಂಗಳೂರು: ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಬಸವ ಮಂಟಪದ ಮಾತೆ ಮಹಾದೇವಿ ಅವರು ಪುನರುಚ್ಚರಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್‍ನಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೇ ನಮ್ಮ ಬೆಂಬಲ, ಈ ಹೇಳಿಕೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಅಂತೆಯೇ ಜೆಡಿಎಸ್ ನ ಸದಸ್ಯ ಬಸವರಾಜ ಹೊರಟ್ಟಿ ಅವರು ಕಾಂಗ್ರೆಸ್ ಬೆಂಬಲಿಸಲು ನಾನು ನೀಡಿದ್ದ ಹೇಳಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಿರುವುದು ಹಾಸ್ಯಾಸ್ಪದವಾಗಿದೆ. ನನ್ನ ಹೇಳಿಕೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮಾತೆ ಮಹಾದೇವಿ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯನವರು ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನ ನೀಡಬೇಕು ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಹೇಳಿಕೆ ನೀಡಿದ್ದೆ. ಇದು ಸಮಾವೇಶದಲ್ಲಿ ಮಠಾಧೀಶರು ತೆಗೆದುಕೊಂಡ ಉಚಿತ ನಿರ್ಣಯವಾಗಿತ್ತು. ಹೀಗಾಗಿ ನಾನು ಹೇಳಿಕೆ ನೀಡಿದೆ. ಇದನ್ನು ಹಿಂಪಡೆಯುವಂತೆ ಹೇಳಲು ಬಸವರಾಜ ಹೊರಟ್ಟಿ ಯಾರು ಎಂದು ಅವರು ಪ್ರಶ್ನಿಸಿದರು.
'ನನ್ನ ಹೇಳಿಕೆಯನ್ನು ಹಿಂಪಡೆಯುವಂತೆ ಕೇಳಿರುವ ಬಸವರಾಜ ಹೊರಟ್ಟಿ ಅವರು ಜಾಗತಿಕ ಲಿಂಗಾಯತ ಮಹಾಸಭೆಗೆ ರಾಜೀನಾಮೆ ಕೊಟ್ಟರೆ ಅವರಿಗೆ ನಷ್ಟವಾಗುತ್ತೆ ಹೊರತು ಸಂಸ್ಥೆಗೆ ನಷ್ಟವಿಲ್ಲ. ಈ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಈ ಮೂವರೊಳಗೆ ಯಾರು ಹಿತವರು ನಿನಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿಸಿದೆ. ಜೆಡಿಎಸ್ ನಲ್ಲಿ ಕುಟುಂಬದ ವ್ಯವಸ್ಥೆ ಇದೆ, ಸೈದ್ಧಾಂತಿಕ ನಿಲುವಿಲ್ಲ. ಬಿ.ಜೆ.ಪಿ ಗೆ ಸೈದ್ದಾಂತಿಕ ಹಿನ್ನೆಲೆ ಇರುವುದಾದರೂ ಹಿಂದೂ ವಾದದ ಮೇಲೆ ನಿಂತಿದೆ. ಕಾಂಗೆಸ್ ಗೆ ಗಾಂಧಿ, ನೆಹರೂ ರೂಪಿಸಿದ ಸಿದ್ದಾಂತವಿದೆ. ಈ ಹಿನ್ನೆಲೆಯಲ್ಲಿ ಸರ್ವಧರ್ಮ ಸಮಾನತೆಗೆ ಅವಕಾಶ ಕಲ್ಪಿಸುವ ಕಾಂಗ್ರೆಸ್‍ಗೆ ಬೆಂಬಲಿಸುತ್ತೇನೆ ಮತ್ತು ಜನ ಬೆಂಬಲಿಸುವಂತೆ ಹೇಳಿಕೆ ನೀಡುತ್ತೇನೆ ಎಂದು ಮಾತೆ ಮಹಾದೇವಿ ಹೇಳಿದರು.
ಬಿಎಸ್ ವೈ ಅನುಕೂಲಸಿಂಧು ರಾಜಕಾರಣಿ
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮಾತೆ ಮಹಾದೇವಿ ಅವರು, ಲಿಂಗಾಯತರಾಗಿ ಹುಟ್ಟಿದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ಪ್ರಶ್ನೆ ಬಂದಾಗಿ ಮಾತನಾಡದೆ ಮೌನ ತಾಳಿದರು. ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮೀತ್ ಶಾ ಅವರು ರಾಜ್ಯಕ್ಕೆ ಪ್ರಚಾರಕ್ಕಾಗಿ ಆಗಮಿಸಿದಾಗ ಲಿಂಗಾಯತ ಧರ್ಮ ಕುರಿತ ಆಘಾತಕಾರಿ ಹೇಳಿಕೆಯನ್ನು ಹರಿಬಿಟ್ಟರು. ಇದರಿಂದ ಬಿಜೆಪಿಯಿಂದ ದೂರ ಸರಿಯುವಂತಾಯಿತು. ಈ ಮೊದಲು ನೀವು ಬಿಜೆಪಿಯನ್ನು ಬೆಂಬಲಿಸಿದ್ದೀರಿ ನಿಮ್ಮ ಅನುಕೂಲಸಿಂಧುವಾಗಿ ಪಕ್ಷಗಳಿಗೆ ಬೆಂಬಲಿಸಿದ್ದೀರಾ ಎಂಬ ಪ್ರಶ್ನೆಗೆ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಿಜೆಪಿಯಿಂದ ಮನಸ್ಸಿಗೆ ನೋವುಂಟಾಗಿದೆ. ಆ ಸಂದರ್ಭದಲ್ಲಿ ಆರ್.ಎಸ್.ಎಸ್ ನವರು ಮಠಾಧೀಶರಿಗೆ ಉಗ್ರರ ಸಂಪರ್ಕವಿದೆ. ಅವರಿಂದ ಹಣ ಪಡೆಯುತ್ತಾರೆ ಎಂಬಂತಹ ಹೇಳಿಕೆಗಳನ್ನು ನೀಡಿದ್ದು ತಾವು ಬದಲಾಗಲು ಕಾರಣವಾಗಿದೆ ಎಂದರು.
ಆನಂದ ದೇವಪ್ಪ ಎಂಬುವರಿಗೆ ಕಾಂಗ್ರೆಸ್‍ನ ಟಿಕೆಟ್ ಕೊಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಕೊಟ್ಟಿದ್ದರಲ್ಲಿ ಯಾವುದೇ ಒತ್ತಡವಿಲ್ಲ, ಲಾಭಿ ಇಲ್ಲ. ದೇವಪ್ಪ ಅವರು ಕೋರಿದ್ದರಿಂದ ಅಂತಹ ಪತ್ರವನ್ನು ಅವರಿಗೆ ನೀಡಲಾಯಿತು ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‍ಗೆ ಬೆಂಬಲ ವ್ಯಕ್ತಪಡಿಸುತ್ತಿರುವ ನೀವು ಕಾಂಗ್ರೆಸ್ ವಕ್ತಾರರೇ? ಎಂಬ ಕಟು ಪ್ರಶ್ನೆಗೆ ಅವರು ನಾನು ಅಧಿಕೃತವಾಗಿ ಕಾಂಗ್ರೆಸ್ ವಕ್ತಾರರಾಗಿ ಮಾತನಾಡುತ್ತಿಲ್ಲ. ವೈಯಕ್ತಿಕವಾಗಿ ಕಾಂಗ್ರೆಸ್‍ನ ಸಿದ್ದಾಂತಗಳಿಂದಾಗಿ ವಯಕ್ತಿಕವಾಗಿ ಕಾಂಗ್ರೆಸ್‍ಗೆ ಬೆಂಬಲಿಸುತ್ತಿದ್ದೇನೆ ಎಂದ ಅವರು ನಮಗೆ ನೆರವಾದವರಿಗೆ ನೆರವಾಗಬೇಕೆನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಪರವಾಗಿ ಜನಾಭಿಪ್ರಾಯ ರೂಪಿಸುವುದಾಗಿ ಹೇಳಿದರು.