ಬಾದಾಮಿ: ತೀವ್ರ ಕುತೂಹಲ ಕೆರಳಿಸಿದ್ದ ಬಾದಾಮಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕೊನೆಗೂ ಅಂತಿಮವಾಗಿದ್ದು, ಟಿಕೆಟ್ ಪಡೆದಿದ್ದ ದೇವರಾಜ್ ಪಾಟೀಲ್ ಅವರ ಬದಲಿಗೆ ಸಿಎಂ ಸಿದ್ದರಾಮಯ್ಯ ಸ್ಪರ್ದೆ ಮಾಡುತ್ತಿದ್ದಾರೆ.
ಆ ಮೂಲಕ ಬಾದಾಮಿ ಹಾಲಿ ಚುನಾವಣಾ ಕಣದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು, ಕುರುಬ ಸಮುದಾಯ ನಿರ್ಣಾಯಕ ಪಾತ್ರ ವಹಿಸುವ ಈ ಕ್ಷೇತ್ರದಲ್ಲಿ ಅದೇ ಸಮುದಾಯಕ್ಕೆ ಸೇರಿರುವ ಸಿದ್ದರಾಮಯ್ಯ ಅವರ ಗೆಲುವು ಸುಲಭ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇನ್ನು ಕ್ಷೇತ್ರದ ಹಾಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಕೂಡ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿದ್ದರಾದರೂ, ಅವರನ್ನು ಹೊರತು ಪಡಿಸಿ ದೇವರಾಜ್ ಪಾಟೀಲ್ ಗೆ ಟಿಕೆಟ್ ಘೋಷಣೆ ಮಾಡಿದ್ದು ಅವರ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ಹಿಂದೆ ಸಚಿವರಾಗಿರಾಗಿದ್ದ ಬಿ.ಬಿ.ಚಿಮ್ಮನಕಟ್ಟಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡವರೆಗೆ ವರ್ಚಸ್ಸು ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಕುರುಬ ಸಮುದಾಯ ಪ್ರಬಲವಾಗಿದ್ದು, ಚಿಮ್ಮನಕಟ್ಟಿ ಅವರು ಸಹ ಕುರುಬ ಸಮುದಾಯದ ಮುಖಂಡರು. ಇವರ ಮೇಲೆ ಯಾವುದೇ ಗಂಭೀರ ಆರೋಪಗಳಿಲ್ಲ ಎಂಬುದು ಗಮನಾರ್ಹ. ಆದರೆ ಕ್ಷೇತ್ರದಲ್ಲಿ ಚಿಮನಕಟ್ಟಿ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಬರ ಪರಿಸ್ಥಿತಿ ನಿಭಾಯಿವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ವಿರೋಧಿ ಅಲೆ ಇಲ್ಲ ಎನ್ನಬಹುದು. ಇದೇ ಕಾರಣಕ್ಕೆ ಹಾಲಿ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸಾಕಷ್ಟು ಜವಾಬ್ದಾರಿಗಳಿದ್ದು, ಕೇವಲ ಚುನಾವಣಾ ಗೆಲುವಿಗಾಗಿ ಮಾತ್ರವಲ್ಲದೇ ಕ್ಷೇತ್ರದ ಅಭಿವೃದ್ಧಿಗೂ ಸಿದ್ದರಾಮಯ್ಯ ಗಮನಹರಿಸಲೇಬೇಕಿದೆ.
ಅಭ್ಯರ್ಥಿಯಾದರೇ ಸಾಲದು, ಪಕ್ಷ ಸಂಘಟನೆಗೂ ಸಿದ್ದು ಮುಂದಾಗಬೇಕು
ಇನ್ನು ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದವರಲ್ಲ. ತಮ್ಮ ತವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದಾಗಿ ಸಿಎಂ ಸಿದ್ದರಾಮಯ್ಯ ಬಾದಾಮಿಗೆ ಬಂದಿದ್ದಾರೆ ಎಂದು ವಿಪಕ್ಷಗಳು ಟೀಕಿಸುತ್ತಿವೆ. ಇಂತಹುದೇ ಆಂತರಿ ಅಭಿಪ್ರಾಯ ಬಾದಾಮಿಯ ಕಾಂಗ್ರೆಸ್ ಕಾರ್ಯಕರ್ತರಲ್ಲೂ ಕೂಡ ಇದ್ದು, ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದರೆ ಯಾವುದಾದರೂ ಒಂದು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಲೇಬೇಕಾಗುತ್ತದೆ. ಚಾಮುಂಡೇಶ್ವರಿ ಸಿದ್ದರಾಮಯ್ಯ ಅವರ ತವರಾಗಿದ್ದು, ಅಲ್ಲಿ ರಾಜಿನಾಮೆ ಅಸಾಧ್ಯ. ಹೀಗಾಗಿ ಸಿದ್ದರಾಮಯ್ಯ ಬಾದಾಮಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗುತ್ತದೆ. ಆಗ ಮತ್ತೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ. ಆಗ ಹಾಲಿ ಚುನಾವಣೆಯಲ್ಲಿ ಕಾರ್ಯಕರ್ತರು ಪಟ್ಟ ಕಷ್ಟ ನೀರಿನಲ್ಲಿ ತೊಳೆದಂತಾಗುತ್ತದೆ ಎಂದು ಕಾರ್ಯಕರ್ತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಈಗಾಗಲೇ ಕೈ ಕಾರ್ಯಕರ್ತರಲ್ಲಿ ಆಂತರಿಕ ಅಸಮಾಧಾನ ಬೇಯುತ್ತಿದೆ. ಬಾದಾಮಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ಕಾರ್ಯ ಆರಂಭಿಸುತ್ತಿದ್ದಂತೆಯೇ ಈ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜಾತಿ ಲೆಕ್ಕಾಚಾರದಲ್ಲೆ ಕೈಗೆ ಸೆಡ್ಡುಹೊಡೆದ ಜೆಡಿಎಸ್
ಇನ್ನು ಯಾವ ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷ ಸಿಎಂ ಸಿದ್ದರಾಮಯ್ಯ ಅವರನ್ನು ಬಾದಾಮಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿಸಿದೆಯೋ ಅದೇ ಜಾತಿ ಲೆಕ್ಕಾಚಾರದಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದಿದೆ. ಪಂಚಮಸಾಲಿ ಸಮುದಾಯದ ಹನುಮಂತ ಮಾವಿನ ಮರದ್ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಬಾದಾಮಿಯಲ್ಲಿ ಕುರುಬ ಸಮುದಾಯದಂತೆಯೇ ಪಂಚಮಸಾಲಿ ಸಮುದಾಯ ಕೂಡ ಪ್ರಬಲ ಸಮುದಾಯವಾಗಿದ್ದು. ಹಾಲಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.
ಈ ಹಿಂದಿನ ಚುನಾವಣೆಯಲ್ಲಿ ಅಂದರೆ 2013ರಲ್ಲಿ ಬಿಜೆಪಿ-ಕೆಜೆಪಿ ಗೊಂದಲದಿಂದ ಹಾಗೂ ಸಹೋದರ ಸಂಬಂಧಿಗಳಾದ ಬಿಜೆಪಿಯ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹಾಗೂ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಹಾಂತೇಶ ಮಮದಾಪೂರ ನಡುವೆ ಲಿಂಗಾಯತ ಮತಗಳು ಹಂಚಿ ಹೋಗಿದ್ದವು. ಇದು ಚಿಮ್ಮನಕಟ್ಟಿ ಅವರ ಗೆಲುವಿಗೆ ಕಾರಣವಾಯಿತು. ಈ ಬಾರಿ ಮತ್ತೆ ಬಿಜೆಪಿಯ ಗೊಂದಲಗಳು ಸಿದ್ದರಾಮಯ್ಯ ಅವರ ಗೆಲುವನ್ನು ಸುಲಭ ಮಾಡಿಕೊಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
2013ರ ಫಲಿತಾಂಶ
ಬಿ.ಬಿ.ಚಿಮ್ಮನಕಟ್ಟಿ (ಕಾಂಗ್ರೆಸ್) : 57,103
ಮಹಾಂತೇಶ ಮಮದಾಪೂರ(ಜೆಡಿಎಸ್) : 41,957
ಎಂ.ಕೆ.ಪಟ್ಟಣ ಶೆಟ್ಟಿ (ಬಿಜೆಪಿ) : 30,143
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics