ಮಂಡ್ಯ: ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಶ್ ಅವರ ಮೊಂಡಾಟಕ್ಕೆ ಹೈರಾಣಾಗಿದ್ದ ಕಾಂಗ್ರೆಸ್ ಕೊನೆಗೂ ಮಂಡ್ಯ ಟಿಕೆಟ್ ಅನ್ನು ಪ್ರಬಲ ಆಕಾಂಕ್ಷಿಯಾಗಿದ್ದ ರವಿಕುಮಾರ್ ಗೌಡ ಗಾಣಿಗ ಅವರಿಗೆ ನೀಡಿದೆ.
ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಮಂಡ್ಯ ಕ್ಷೇತ್ರದಲ್ಲಿ ಅಂಬರೀಶ್ ಸ್ಪರ್ಧಿಸಲು ನಿರಾಕರಿಸಿದ ಕಾರಣ ಕೊನೆ ಕ್ಷಣದಲ್ಲಿ ರವಿ ಗಾಣಿಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅಂಬರೀಶ್ ತಾವು ನಿಲ್ಲದಿದ್ದರೆ ನನಗೆ ಟಿಕೆಟ್ ಕೊಡಿಸುತ್ತಾರೆ ಎಂದು ನಂಬಿಕೊಂಡಿದ್ದ ಅವರ ಆಪ್ತ ಅಮರಾವತಿ ಚಂದ್ರಶೇಖರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂಬರೀಶ್ ಸ್ಪರ್ಧೆ ಮಾಡದಿದ್ದರೆ ತಮಗೇ ಟಿಕೆಟ್ ಕೊಡಿ ಎಂದು ಅಮರಾವತಿ ಚಂದ್ರಶೇಖರ್ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿ, ಅಂಬರೀಶ್ ತಮಗೆ ಅವಕಾಶ ಕೊಡಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು. ಇದರಿಂದ ಆಕ್ರೋಶಗೊಂಡಿರುವ ಅಂಬರೀಶ್ ತಾವು ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.