ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
ಬೆಂಗಳೂರು: ಖಾತೆ ಹಂಚಿಕೆ ವಿಚಾರ ಇದೀಗ ಕಾಂಗ್ರೆಸ್ ಪಾಳಯಕ್ಕೆ ಕಗ್ಗಂಟಾಗಿ ಪರಿಣಮಿಸಿದ್ದು, ನೂತನ ಸಚಿವರಿಗೆ ಖಾತೆ ಹಂಚುವ ಪ್ರಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಮುಖ ನಾಯಕರಾದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಡುವೆ ಮನಸ್ತಾಪವುಂಟಾಗಿದೆ.
ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಅವರು ತಮ್ಮ ಬಳಿ ಇರುವ ಪ್ರಮುಖ ಖಾತೆಗಳನ್ನು ಬಿಟ್ಟುಕೊಡಲು ನೇರವಾಗಿ ನಿರಾಕರಿಸಿದ ಹಿನ್ನಲೆಯಲ್ಲಿ ಖಾತೆ-ತ್ಯಾತೆ ಪರಿಹರಿಸಲು ಮಧ್ಯಸ್ಥಿಕೆ ವಹಿಸಿದ್ದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಾಡಿದ ಪ್ರಯತ್ನಗಳು ವಿಫಲಗೊಂಡಿವೆ.
ಇದರ ಪರಿಣಾಮ ಈ ನಾಯಕರು ಹೊಂದಿರುವ ಎರಡು ಪ್ರಮುಖ ಖಾತೆಗಲ ಬಗ್ಗೆ ಅಂತಿಮ ತೀರ್ಮಾನ ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಅಂಗಳ ತಲುಪಿದೆ.
ಖಾತೆ-ಕ್ಯಾತೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಿನ್ನೆಯಷ್ಟೇ ವೇಣುಗೋಪಾಲ್ ನೇತೃತ್ವದಲ್ಲಿ ಸಭೆ ನಡೆದಿತ್ತು. ರಾಜ್ಯ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಡುವೆ ಮಾತಿನ ಚಕಮಕಿ ನಡೆದಿದೆ. ಹೀಗಾಗಿ ಕ್ಯಾತೆಗೆ ಪರಿಹಾರ ದೊರೆಯದೇ ಈ ವಿಚಾರ ರಾಹುಲ್ ಅಂಗಳ ತಲುಪಿದೆ.
ಸಭೆಯಲ್ಲಿ ಪರಮೇಶ್ವರ್ ಹೆಚ್ಚುವರಿಯಾಗಿ ಹೊಂದಿರುವ ಗೃಹ ಅಥವಾ ಬೆಂಗಳೂರು ನಗರಾಭಿವೃದ್ಧಿ ಮತ್ತು ಶಿವಕುಮಾರ್ ಅವರು ಹೊಂದಿರುವ ಜಲ ಸಂಪನ್ಮೂ ಹಾಗೂ ವೈದ್ಯ ಶಿಕ್ಷಣ ಈ ಪೈಕಿ ಇಬ್ಬರೂ ತಲಾ ಒಂದು ಖಾತೆ ಬಿಟ್ಟುಕೊಡಬೇಕು ಮತ್ತು ಈ ನಾಯಕರು ಬಿಟ್ಟುಕೊಡುವ ಈ ಪ್ರಮುಖ ಖಾತೆಗಳ ಪೈಕಿ ತಲಾ ಒಂದನ್ನು ನೂತನ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಇ.ತುಕರಾಂ ಅವಕಿದೆ ನೀಡುವ ಕುರಿತು ಚರ್ಚೆ ನಡೆದಿದೆ.
ಕೇವಲ ಗೃಹ ಹಾಗೂ ವೈದ್ಯಕೀಯ ಶಿಕ್ಷಣ ಮಾತ್ರವಲ್ಲದೆ, ಕೃಷ್ಣಬೈರೇಗೌಡ ಅವರು ಹೊಂದಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಾನೂನು ಖಾತೆಗಳ ಪೈಕಿ ಗ್ರಾಮೀಣಾಭಿವೃದ್ಧಿಯನ್ನೂ ಹಿಂಪಡೆಯುವ ಬಗ್ಗೆ ಹಾಗೂ ಕೆ.ಜೆ.ಜಾರ್ಜ್ ಹೊಂದಿರುವ ಕೈಗಾರಿಕೆ ಹಾಗೂ ಐಟಿ-ಬಿಟಿ ಖಾತೆಗಳ ಪೈಕಿ ಐಟಿ-ಬಿಟಿ ಖಾತೆಯನ್ನು ಹಿಂಪಡೆದು ನೂತನ ಸಚಿವರಿಗೆ ಹಂಚುವ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಪಕ್ಷದ ಹಿರಿಯ ನಾಯಕರಲ್ಲಿಯೇ ಒಮ್ಮತ ಮೂಡಿಲ್ಲ. ಅದರಲ್ಲೂ ಗೃಹ ಖಾತೆ ಹಾಗೂ ವೈದ್ಯ ಶಿಕ್ಷಣ ಖಾತೆಯನ್ನು ಹಿಂಪಡೆಯುವ ಪ್ರಸ್ತಾಪಕ್ಕೆ ಪರಮೇಶ್ವರ್ ಹಾಗೂ ಶಿವಕುಮಾರ್ ಸುತರಾಂ ಒಪ್ಪಿಲ್ಲ.
ಈ ನಡುವೆ ಒಂದು ಹಂತದಲ್ಲಿ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗುತ್ತಿದೆ. ಅಂತಿಮವಾಗಿ ಪ್ರಮುಖ ಖಾತೆಗಳನ್ನು ಹಿಂಪಡೆಯಬೇಕೋ ಅಥವಾ ಹಾಲಿ ಪ್ರಭಾವ ಸಚಿವರಲ್ಲೇ ಸದರಿ ಖಾತೆಗಳನ್ನು ಮುಂದುವರೆಸಬೇಕೋ ಎಂಬ ಬಗ್ಗೆ ರಾಹುಲ್ ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿ ಎಂದು ಸಭೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics