ಮಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ತಾವು ಏರ್ಪಡಿಸಿದ್ದ ಔತಣಕೂಟ ವಿಚಾರ ಸಂಬಂಧ ಬಿಜೆಪಿ ನಾಯಕರಿಂದ ತೀವ್ರ ವಿರೋಧ ಎದುರಿಸುತ್ತಿರುವ ಸಚಿವ ಯುಟಿ ಖಾದರ್ ಇದೀಗ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಊಟ, ಸೌಹಾರ್ಧಕೂಟಕ್ಕೂ ಬಿಜೆಪಿ ನಾಯಕರ ಅನುಮತಿ ಪಡೆಯಬೇಕಾ ಎಂದು ಹೇಳಿದ್ದಾರೆ.
ಇತ್ತೀಚೆಗೆ ತಮ್ಮ ನಿವಾಸದಲ್ಲಿ ನಡೆದ ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಖಾದರ್ ಮನೆಗೆ ಬಂದ ಸಿಎಂ ಸಂತೋಷ್ ಮನೆಗೆ ಆಗಮಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕಿತ್ತು. ಆದರೆ ಸಿಎಂ ಸಂತೋಷ್ ಹತ್ಯೆ ಬಳಿಕ ಉಂಟಾಗಿದ್ದ ಗಲಭೆಯಲ್ಲಿ ಪಾಲ್ಗೊಂಡಿದ್ದವರೊಂದಿಗೇ ಕುಳಿತು ಭೋಜನ ಸವೆದಿದ್ದಾರೆ ಎಂದು ಆರೋಪಿಸಿದ್ದರು.
ಈ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಯುಟಿ ಖಾದರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದ್ದು, ಪ್ರತಿಯೊಂದಕ್ಕೂ ಅವರನ್ನು ದೂಷಿಸುವುದು ಸರಿಯಲ್ಲ ಎಂದು ಖಾದರ್ ಹೇಳಿದ್ದಾರೆ. " ಸುಮಾರು ನಾಲ್ಕು ವರ್ಷಗಳ ಬಳಿಕ ಸಿಎಂ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ. ಹೀಗಾಗಿ ಅವರಿಗಾಗಿ ಔತಣಕೂಟ ಏರ್ಪಡಿಸಿದ್ದೆನೇ ಹೊರತು ಇನ್ನಾವುದೇ ವಿಚಾರಕ್ಕೂ ಅಲ್ಲ. ಸುಖಾ ಸುಮ್ಮನೆ ಸಿಎಂ ವಿರುದ್ಧ ಆರೋಪ ಸರಿಯಲ್ಲ. ನಮ್ಮ ಮನೆಯ ಊಟ, ಸೌಹಾರ್ಧ ಕೂಟಕ್ಕೂ ನಾವು ಬಿಜೆಪಿಯವರ ಅನುಮತಿ ಪಡೆಯಬೇಕೇ..? ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಲು ಅವರ ಬಳಿ ಏನೂ ಇಲ್ಲ. ಈ ಕಾರಣಕ್ಕಾಗಿ ಅವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕರಿಗೆ ನೈತಿಕತೆಯೇ ಇಲ್ಲ. ಕಳೆದ ನಾಲ್ಕು ತಿಂಗಳಿನಿಂದ ಯಾವ ಯಾವ ಹತ್ಯೆಯಾಗಿದೆ ಎಂಬುದನ್ನು ಲೆಕ್ಕ ಹಾಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಿನ್ನೆಯ ಔತಣಕೂಟದ ಆರೋಪಗಳಿಗೆ ಮಹತ್ವ ಕೊಡುಪ ಅಗತ್ಯ ಇಲ್ಲ ಎಂದು ಯುಟಿ ಖಾದರ್ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.