ಬೆಂಗಳೂರು: ರಾಜ್ಯದಲ್ಲಿ ಸಾಲು ಸಾಲು ಹಿಂದೂ ಸಂಘಟನೆ/ ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಲಾಗುತ್ತಿರುವ ವಿಷಯ ಫೆ.08 ರಂದೂ ಸಹ ಸದನದಲ್ಲಿ ಚರ್ಚೆಯಾಗಿದೆ. ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಆಕ್ರೋಶಂಡ ಬಿಜೆಪಿ ನಾಯಕರು, ಮೊನ್ನೆ ರುದ್ರೇಶ್, ನಿನ್ನೆ ಕದಿರೇಶ್, ನಾಳೆ ಯಾರಿಗೆ ಸ್ಕೆಚ್ ಹಾಕಿದ್ದೀರಿ? ಎಂದು ಪ್ರಶ್ನಿಸಿದ್ದಾರೆ, ಈ ಪ್ರಶ್ನೆ ಬರುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರೊಬ್ಬರಿಂದ ಸಿಟಿ ರವಿ ಎಂಬ ಉತ್ತರ ಬಂದಿತು!
ತಕ್ಷಣವೇ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ, ಶಾಸಕ ಸಿಟಿ ರವಿ, ಸ್ಕೆಚ್ ಹಾಕಿದ್ದರೆ ಹೇಳಿ ಸಾವಿಗೆ ಹೆದರುವುದಿಲ್ಲ ಎಂದು ತಮ್ಮ ಹೆಸರು ಹೇಳಿದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಸಿಟಿ ರವಿ ಅವರ ಹೆಸರು ಹೇಳಿದ್ದಕ್ಕೆ ಬಿಜೆಪಿಯ ನಾಯಕರೂ ತೀವ್ರ ಆಕ್ರೋಶಗೊಂಡಿದ್ದು, ಸಿಟಿ ರವಿ ಅವರ ಹೆಸರು ಹೇಳಿದ್ದು ಯಾರು ಎಂಬುದು ತಿಳಿಯಬೇಕೆಂದು ಪಟ್ಟು ಹಿಡಿದರು, ಮಧ್ಯಪ್ರವೇಶಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಸಚಿವ ಕೃಷ್ಣ ಭೈರೇಗೌಡ ಸಿಟಿ ರವಿ ಅವರ ಹೆಸರನ್ನು ಹೇಳಿರುವುದನ್ನು ಹಗುರವಾಗಿ ಪರಿಗಣಿಸಬೇಕು, ಈ ವಿಷಯವನ್ನು ದೊಡ್ಡದು ಮಾಡಬೇಡಿ, ಇದಕ್ಕಾಗಿ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.
ಸಿಟಿ ರವಿ ಅವರಿಗೆ ಈಗಾಗಲೇ ಕೊಲೆ ಬೆದರಿಕೆಗಳಿವೆ, ಈ ರೀತಿಯ ಹೇಳಿಕೆ ಸರಿಯಲ್ಲ, ಯಾರು ಹೆಸರು ಹೇಳಿದ್ದಾರೆಂಬುದು ರಾಜ್ಯದ ಜನತೆಗೆ ಗೊತ್ತಾಗಬೇಕೆಂದು ಬಿಜೆಪಿ ನಾಯಕರು ಪಟ್ಟು ಹಿಡಿದರು, ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.