ಬೆಂಗಳೂರು: ಇತ್ತೀಚೆಗೆ ಬೆಂಗಲೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಭಾಷಣದಿಂಡಾಗಿ ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ. ಇದೇ ವೇಳೆ ಪ್ರಧಾನಿ ರಾಜ್ಯ ಸರ್ಕಾರ 'ಶೇ.“10ರ ಸರ್ಕಾರ' ಎಂದು ಘೋಷಿಸಿದ್ದರು. ಈಗ ರಾಜ್ಯದ ಕಾಂಗ್ರೆಸ್ ನಾಯಕರು ರಾಹುಲ್ ರಾಜ್ಯ ಪ್ರವಾಸಕ್ಕಾಗಿ ಕಾದು ನೋಡುತಿದ್ದು ರಾಹುಲ್ ಗಾಂಧಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣ ಸೃಷ್ಟಿಸಲಿದ್ದಾರೆ ಎಂದು ನಿರೀಕ್ಷಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು ಫೆ.10ರಿಂದ 12ರವರೆಗೆ ರಾಜ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇತ್ತೀಚಿನ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅವರು ನಡೆಸಿದ್ದ ಅಭಿಯಾನದ ಮಾದರಿಯನ್ನೇ ಇಲ್ಲಿಯೂ ಮುಂದುವರಿಸಲಿರುವ ರಾಹುಲ್ ತಮ್ಮ ಮೂರು ದಿನದ ರಾಜ್ಯ ಪ್ರವಾಸದ ವೇಳೆ ಸ್ಥಳೀಯ ಜನರೊಂದಿಗೆ ಸಂವಹನ ಮತ್ತು ಅನೇಕ ಚಿಕ್ಕ ಚಿಕ್ಕ ರ್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ.
"ರಾಹುಲ್ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ರೋಡ್ ಶೋ ನಂತಿರಲಿದ್ದು ಇದು ಕಾಂಗ್ರೆಸ್ ಗೆ ಸಹಾಯವಾಗಲಿದೆ. ರಾಹುಲ್ ಭೇಟಿಯ ಬಗ್ಗೆ ನಾವು ಹೆಚ್ಚು ಉತ್ಸುಕರಾಗಿದ್ದೇವೆ. ಹೊಸಪೇಟೆಯ ಬೃಹತ್ ರ್ಯಾಲಿಯ ಹೊರತಾಗಿ ಅವರು ಅನೇಕ ಕಡೆ ಚಿಕ್ಕ ಚಿಕ್ಕ ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂತಹಾ ಕಾರ್ಯಕ್ರಮಗಳಲ್ಲಿ ಅವರು ನೇರವಾಗಿ ಸಾರ್ವಜನಿಕರ ಜತೆ ಸಂವಹನ ನಡೆಸಲಿದ್ದಾರೆ" ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂ ರಾವ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ರಾಹುಲ್ ರೋಡ್ ಶೋ ಶನಿವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ಪ್ರಾರಂಭಗೊಳ್ಳಲಿದ್ದು ಸೋಮವಾರ ಕಲಬುರ್ಗಿಯಲ್ಲಿ ಕೊನೆಗೊಳ್ಳಲಿದೆ. ಮಾರ್ಗ ಮದ್ಯದಲ್ಲಿ ರಾಹುಲ್ ದೇವಾಲಯಗಳು, ಮಸೀದಿ ಮತ್ತು ಮಠಕ್ಕೆ ಭೇಟಿ ಕೊಡಲಿದ್ದಾರೆ. ರಾಹುಲ್ ಕೊಪ್ಪಳದಲ್ಲಿರುವ ಹುಲೀಗಮ್ಮ ದೇವಸ್ಥಾನ ಮತ್ತು ಗವಿ ಸಿದ್ಧೇಶ್ವರ ಮಠ, ಕಲಬುರಗಿದಲ್ಲಿ ಖ್ವಾಜಾ ಬಂಡೆ ನವಾಜ್ ದರ್ಗಾ ಮತ್ತು ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿದೆ.
"ಗುಜರಾತ್ ಮಾದರಿಯ ಸಾಫ್ಟ್ ಹಿಂದುತ್ವವು ಇಲ್ಲಿ ಕೆಲಸ ಮಾಡುವುದಿಲ್ಲ" ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. "ರಾಹುಲ್ ಗಾಂಧಿಯವರು ಜನರೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ ಮತ್ತು ಪಕ್ಷಕ್ಕೆ ಹೆಚ್ಚಿನ ಲಾಭ ಒದಗಿಸಲಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಸಿದ್ದರಾಮಯ್ಯ ಮಾತ್ರವೇ ಇಲ್ಲಿ ಜನಪ್ರಿಯ ನಾಯಕರಾಗಿದ್ದಾರೆ" ರಾಜಕೀಯ ವಿಶ್ಲೇಷಕರಾದ ಎಂ. ಮದನ್ ಮೋಹನ್ ಹೇಳಿದರು.
ಕರಾವಳಿ ಜಿಲ್ಲೆಗಳಲಿಗೆ ಅಮಿತ್ ಶಾ ಭೇಟಿ
ಇದೇ ವೇಳೆ ಫೆ.18-20ರ ನಡುವೆ ಮೂರು ದಿನಗಳ ಕಾಲ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನಿಡಲಿದ್ದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ ಶಾ ಕೋಮು ಗಲಭೆಗೆ ಬಲಿಯಾದ ದೀಪಕ್ ರಾವ್ ಮನೆಗೆ ಭೇಟಿ ನೀಡುವವರಿದ್ದು ಇದಾದ ಬಳಿಕ ಪತ್ರಿಕಾಗೋಷ್ಟಿ ನಡೆಸಲಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಉಡುಪಿಯ ಕೃಷ್ಣ ಮಠ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಹ ಭೇಟಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.