ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ನಾಂದಿ ಹಾಡಲಿದೆ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಗೆದ್ದು, ರಾಹುಲ್ ಗಾಂಧಿ ಪ್ರಧಾನಿ ಆಗಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಕರೆ ನೀಡಿದ್ದಾರೆ.
ಇಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ಕೊಟ್ಟಿದ್ದೇವೆ. ಭವಿಷ್ಯಃ ರಾಜ್ಯದ ಇತಿಹಾಸದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ ಇದ್ದರೆ ಅದು ನಮ್ಮ ಸರ್ಕಾರ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.
ಅನ್ನ ಭಾಗ್ಯ, ಕ್ಷೀರ ಭಾಗ್ಯ, ಮೈತ್ರಿ ಆರೋಗ್ಯ ಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವು ಭಾಗ್ಯ ನೀಡಿದ್ದೇವೆ. ಎಲ್ಲಾ ಕಾರ್ಯಕ್ರಮಮ ಒಂದು ಜಾತಿಗೆ ಸೀಮಿತವಾಗಿಲ್ಲ. ರಾಜ್ಯದ ಶೇ 90ರಷ್ಟು ಜನರಿಗೆ ಒಂದಲ್ಲಾ ಒಂದು ಯೋಜನೆ ಕೊಟ್ಟಿದ್ದೇವೆ. ಬಡವರು, ಅಲ್ಪಸಂಖ್ಯಾತರು, ದಲಿತರು, ರೈತರು ಮಹಿಳೆಯರಿಗೆ ಕೊಡುಗೆ ಕೊಟ್ಟಿದ್ದೇವೆ ಎಂದರು.
ನವ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಕಾರ್ಯಕ್ರಮದ ಮೂಲಕ ಭಾಷ್ಯ ಬರೆದಿದ್ದೇವೆ. ಇವತ್ತು ಕರ್ನಾಟಕ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ. ಇದು ಮುಂದುವರಿಯಬೇಕಾದರೆ ನವ ಕರ್ನಾಟಕ ನಿರ್ಮಾಣಕ್ಕೆ ಮತ್ತೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇ ಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ, ಮೋದಿ ರಾಜ್ಯಕ್ಕೆ ಬಂದಾಗ ತಾವು ಪ್ರಧಾನಿ ಎಂಬುದನ್ನು ಮರೆತು ಕೀಳ ಮಟ್ಟದ, ಆಧಾರ ರಹಿತ ಬೇಜವಾಬ್ದಾರಿ ಆರೋಪ ಮಾಡಿದ್ದರು. ಅದೂ ಪಕ್ಕದಲ್ಲೇ ಯಡಿಯೂರಪ್ಪ ಕೃಷ್ಣಯ್ಯ ಶೆಟ್ಟಿ ಕಟ್ಡಾ ಸುಬ್ರಹ್ಮಣ್ಯ ಕೂರಿಸಿಕೊಂಡು ನಮ್ಮ ವಿರುದ್ದ ಆರೋಪ ಮಾಡ್ತಾರೆ. ಪ್ರಧಾನಿ ಮೋದಿ ಜೈಲಿಗೆ ಹೋಗಿ ಬಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ‘ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್ ಸರ್ಕಾರ’ ಎಂದು ಹೇಳಲು ಅವರಿಗೆ ನಾಚಿಕೆಯಾಗಬೇಕು’ಎಂದರು.