ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಳೆ (ಜ.7) ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರು ಬೆಂಗಳುರು ಗೋವಿಂದರಾಜ ನಗರದಲ್ಲಿ ನಡೆಯುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನಾಳಿನ ಕಾರ್ಯಕ್ರಮಕ್ಕೆ ಕನಿಷ್ಟ 50 ಸಾವಿರ ಜನ ಸೇರುವ ನಿರೀಕ್ಷೆ ಇದ್ದು ಇದು ಬಿಜೆಪಿ ಪರಿವರ್ತನಾ ಯಾತ್ರೆ ಪ್ರಾರಂಭವಾದ ಬಳಿಕ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೂರನೇ ಕಾರ್ಯಕ್ರಮವಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ತುರುಸಿನ ತಯಾರಿ ನಡೆಸಿರುವ ರಾಜ್ಯ ಬಿಜೆಪಿ ಆದಿತ್ಯನಾಥ್ ಅವರನ್ನು ಪಕ್ಷದ ಸ್ಟಾರ್ ಪ್ರಚಾರಕರನ್ನಾಗಿ ಮಾಡಿಕೊಳ್ಳಲಿದೆ. ಈ ಮೂಲಕ ಅವರು ರಾಜ್ಯದ ವಿವಿಧೆಡೆ ನಡೆಯುವ ಪ್ರಚಾರ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
"ನಾವು 50,000 ಜನರಿಗೆ ಆಸನ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. 240 X 300 ಅಡಿಗಳ ಒಂದು ವೇದಿಕೆಯನ್ನು ನಿರ್ಮಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಕುಡಿಯುವ ನೀರು ಮತ್ತು ಊಟವನ್ನು ವ್ಯವಸ್ಥೆಗೊಳಿಸಲಾಗುವುದು" ಎಂದು ಬಿಜೆಪಿ ಎಂಎಲ್ ಸಿ, ವಿ ಸೋಮಣ್ಣ ಹೇಳಿದರು.
ಇನ್ನು ಯೋಗಿ ಆದಿತ್ಯನಾಥ್ ಪಾಲ್ಗೊಳ್ಳುತ್ತಿರುವ ರಾಜ್ಯದ ಎರಡನೇ ರ್ಯಾಲಿ ಇದಾಗಿದ್ದು ಇದಕ್ಕೂ ಮುನ್ನ ಡಿ.21ರಂದು ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಅವರು ಭಾಗವಹಿಸಿದ್ದರು. "ಹುಬ್ಬಳಿಯಲ್ಲಿನ ಯೋಗಿ ಅವರ ರ್ಯಾಲಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಯೋಗಿಯನ್ನು ವಿಧಾನಸಭೆ ಚುನಾವಣೆಗೆ ಸ್ಟಾರ್ ಪ್ರಚಾರಕರಾಗಿ ಆಯ್ಕೆ ಮಾಡಿದ್ದಾರೆ" ಬಿಜೆಪಿ ರಾಜ್ಯ ಘಟಾಕದ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಪ್ರಚಾರದಿಂದಾಗಿ ಬಿಜೆಪಿಗೆ ಸಾಕಷ್ಟು ಲಾಭವಾಗಿತ್ತು. ದರಂತೆ ರಾಜ್ಯದಲ್ಲೂ ಅವರಿಂದ ಪ್ರಚಾರ ನಡೆಸಲು ಕೇಂದ್ರ ನಾಯಕರು ಚಿಂತನೆ ನಡೆಸಿದ್ದು ಇದೀಗ 2ನೇ ಬಾರಿ ಕರ್ನಾಟಕಕ್ಕೆ ಯೋಗಿ ಆಗಮಿಸಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos