ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಚಿತ್ರದುರ್ಗ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿರುವ ಅವರು, 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್'ನ್ನು ಸೋಲಿಸಲು ಜನರು ಕಾಯುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. 224 ಸ್ಥಾನಗಳಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಉತ್ತರಪ್ರದೇಶ ಮುಖ್ಯಮಂತ್ರಿಗಳನ್ನು ಟೀಕೆ ಮಾಡುತ್ತಿರುವ ಸಿದ್ದರಾಮಯ್ಯ ಹುಚ್ಚ. ದಿನ ಕಳೆಯುತ್ತಿದ್ದಂತೆ ಉತ್ತರಪ್ರದೇಶ ರಾಜ್ಯದ ಪರಿಸ್ಥಿತಿ ಸುಧಾರಿಸುತ್ತಿದೆ. ಕಾಂಗ್ರೆಸ್ ಮಿತ್ರ ಪಕ್ಷಗಳು ಹಾಳು ಮಾಡಿದ್ದ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಯೋಗಿ ಅವರು ಕಾರ್ಯನಿರತರಾಗಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದಿನ ಕಳೆಯುತ್ತಿದ್ದಂತೆ ಹದಗೆಡುತ್ತಿದೆ. ಮಹಿಳೆಯರ ಹತ್ಯೆ, ದಲಿತರ ಮೇಲೆ ದೌರ್ಜನ್ಯ, ಕಾಂಗ್ರೆಸ್ ಶಾಸಕರ ಅಕ್ರಮಗಳೇ ಸಿದ್ದರಾಮಯ್ಯ ಆಡಳಿತ ವಿಫಲವಾಗಿರುವುದಕ್ಕೆ ಉದಾಹರಣೆಗಳಾಗಿವೆ ತಿಳಿಸಿದ್ದಾರೆ.
ಭದ್ರಾ ಮೇಲ್ಡಂಡೆ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಯೋಜನೆಗೆ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯೋಜನೆ ಪೂರ್ಣಗೊಳ್ಳುವಂತೆ ಮಾಡಲಾಗುತ್ತದೆ ಎಂದಿದ್ದಾರೆ.
ನೆರೆ ರಾಜ್ಯಗಳೊಂದಿಗೆ ಉತ್ತಮ ಸಂಬಂಧದಲ್ಲಿರಿ
ಬಳಿಕ ಮಹಾದಾಯಿ ವಿವಾದ ಕುರಿತಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿರುವ ಯಡಿಯೂರಪ್ಪ ಅವರು, ವಿವಾದ ಇತ್ಯರ್ಥಗೊಳ್ಳಲು ನೆರೆರಾಜ್ಯಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿ ಎಂದು ಹೇಳಿದ್ದಾರೆ.
ರಾಜಕೀಯ ಲಾಭಗಳನ್ನು ಪಡೆಯುವ ಸಲುವಾಗಿ ಮಹಾದಾಯಿ ವಿವಾದವನ್ನು ಜೀವಂತವಾಗಿಡಲು ಕಾಂಗ್ರೆಸ್ ಬಯಸಿದೆ. ಕುಡಿಯುವ ನೀರನ್ನು ನೀಡಲು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಸಿದ್ಧರಿದ್ದರೂ, ಕಾಂಗ್ರೆಸ್ ಪಕ್ಷ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ವಿವಾದ ಸಂಬಂಧ ಕಾಂಗ್ರೆಸ್ ದ್ವಿಮುಖ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.