ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿಯವರು ಮೊದಲ ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ 3 ದಿನಗಳ ಕಾಲ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ರಾಹುಲ್ ರಾಜ್ಯ ಪ್ರವಾಸ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿ. ಪರಮೇಶ್ವರ್ ಅವರು, ರಾಹುಲ್ ಗಾಂಧಿಯವರು ಮೂರು ದಿನಗಳ ಕಾಲ ಫೆ.10, 11, 12 ರಂದು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಭೇಟಿ ವೇಳೆ ಮೆಗಾ ರ್ಯಾಲಿ ಹಾಗೂ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆಂದು ಹೇಳಿದ್ದಾರೆ.
ಫೆ.10ರಂದು ರಾಜ್ಯ ಪ್ರವಾಸಕ್ಕೆ ಆಗಮಿಸಲಿರುವ ರಾಹುಲ್ ಅವರು, ಹೊಸಪೇಟೆಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತರ ಅವರನ್ನು ಹಂಪಿಗೆ ಕರೆದೊಯ್ಯುವ ಪ್ರಸ್ತಾವನೆಯಿದೆ ಎಂದು ತಿಳಿಸಿದ್ದಾರೆ.
ರಾಹುಲ್ ಪ್ರವಾಸದ ಮಾರ್ಗವನ್ನು ಅಂತಿಗೊಳಿಸಲು ಜ.25ಕ್ಕೆ ರಾಜ್ಯಕ್ಕೆ ಆಗಮಿಸಲಿರುವ ರಾಹುಲ್ ಆಪ್ತ ಬೈಜು, ಅಲಂಕಾರ್ ಹಾಗೂ ಸಚಿನ್ ರಾವ್ ನೇತೃತ್ವದ ತಂಡ ಖುದ್ದು ರಸ್ತೆ ಮೂಲಕ ಈ ಮಾರ್ಗದಲ್ಲಿ ಸಂಚರಿಸಲಿದೆ. ಇದಾದ ಬಳಿಕ ರಾಹುಲ್ ಎಲ್ಲೆಲ್ಲಿ ಸಂವಾದ, ಪಾದಯಾತ್ರೆ ಹಾಗೂ ಸಮಾವೇಶಗಳನ್ನು ಕೈಗೊಳ್ಳಲಿದ್ದಾರೆಂಬುದನ್ನು ಅಂತಿಮಗೊಳಿಸಲಾಗುತ್ತದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ನಿನ್ನೆ ನಡೆಸ ಹೈದರಾಬಾದ್ ಕರ್ನಾಟಕದ ಮುಖಂಡರ ಸಭೆಯಲ್ಲಿ ರಾಹುಲ್ ಗಾಂಧಿಯವರ ಪ್ರವಾಸದಲ್ಲಿ ಸಂಚರಿಸಬಹುದಾದ 2 ಮಾರ್ಗಗಳನ್ನು ಪ್ರಸ್ತಾಪಿಸಲು ನಿರ್ಧರಿಸಲಾಯಿತು. ಕೊಪ್ಪಳದಿಂದ ಆರಂಭಗೊಳ್ಳುವ ಒಂದು ಮಾರ್ಗ ಯಾದಗಿರಿಯಲ್ಲಿ ಅಂತ್ಯಗೊಂಡರೆ, ಮತ್ತೊಂದು ಮಾರ್ಗ ಕೊಪ್ಪಳದಿಂದ ಆರಂಭಗೊಂಡು ವಿಜಯಪುರದಲ್ಲಿ ಅಂತಿಮಗೊಳ್ಳುತ್ತದೆ. ಈ ಎರಡೂ ಮಾರ್ಗದಲ್ಲಿ ಯಾವುದರಲ್ಲಿ ಸಂಚರಿಸಬೇಕು ಎಂಬುದನ್ನು ರಾಹುಲ್ ತಂಡ ನಿರ್ಧರಿಸಲಿದೆ ಎಂದು ಪರಮೇಶ್ವರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics