ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದಂದು ರೈತರ ಮೇಗಾ ರ್ಯಾಲಿ ನಡೆಸಲು ಬಿಜೆಪಿ ಯೋಜನೆ ನಡೆಸಿದೆ ಎಂದು ತಿಳಿದುಬಂದಿದೆ.
ಫೆ.27 ರಂದು ಯಡಿಯೂರಪ್ಪ ಅವರು 75ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಹಿನ್ನಲೆಯಲ್ಲಿ ಹುಟ್ಟುಹಬ್ಬದ ಸಂಭ್ರಮವನ್ನಾಚರಿಸಲು ದಾವಣಗೆರೆಯಲ್ಲಿ ರೈತರ ಮೆಗಾ ರ್ಯಾಲಿ ನಡೆಸಲು ತೀರ್ಮಾನಿಸಿದೆ.
ಕೇಂದ್ರದ ಮಾಜಿ ಸಚಿವ ಸಿದ್ದೇಶ್ವರ್ ನೇತೃತ್ವದ ಸಮಿತಿ ಮೆಗಾ ರ್ಯಾಲಿಯ ಸಿದ್ಧತೆಗಳನ್ನು ನೋಡುಕೊಳ್ಳುತ್ತಿದೆ. ರ್ಯಾಲಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರೈತ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಶಂಕರ್ ಗೌಡ ಪಾಟೀಲ್ ಅವರು, ದಾವಣೆಗೆರೆಯಲ್ಲಿ ಫೆ.27ರಂದು ಮೆಗಾ ರ್ಯಾಲಿ ನಡೆಸಲಾಗುತ್ತಿದೆ. ರ್ಯಾಲಿಯಲ್ಲಿ 2 ಲಕ್ಷಕ್ಕೂ ಅಧಿಕ ರೈತಲು ಪಾಲ್ಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ರ್ಯಾಲಿಯಲ್ಲಿ ಹಲವಾರು ರಾಷ್ಟ್ರೀಯ ನಾಯಕರು ಹಾಗೂ ಕೇಂದ್ರ ಸಚಿವರೂ ಕೂಡ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಬಲವನ್ನು ಹೆಚ್ಚಿಸಿದ ಹಾಗೂ ರೈತರ ಸಂಪರ್ಕವನ್ನು ಕಲ್ಪಿಸಿದ ಯಡಿಯೂರಪ್ಪ ಅವರಿಗೆ ಕಾರ್ಯಕ್ರಮದಲ್ಲಿ ಗೌರವವನ್ನು ಸಲ್ಲಿಸಲಾಗುತ್ತದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರ್ಯಾಲಿಯಲ್ಲಿ ಭಾಷಣ ಮಾಡಬೇಕೆಂದು ಬಯಸಿದ್ದೇವೆ. ಆಧರೆ, ಫೆ.4 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಇದಾದ ಬಳಿಕವೇ ಎಲ್ಲದರ ಕುರಿತು ಸ್ಪಷ್ಟ ಚಿತ್ರಣಗಳು ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ರೀತಿ ಒಟ್ಟು 19 ರ್ಯಾಲಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ನೇಕಾರರು, ಬಲಿಜರು, ಕೋಳಿ ಸಮಾಜ, ಒಬಿಸಿ, ಮಹಿಳೆ ಮತ್ತು ದಲಿತರ ಕುರಿತಂತೆ ರ್ಯಾಲಿ ನಡೆಸಲಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics