ರಾಜಕೀಯ

ಸಮ್ಮಿಶ್ರ ಸರ್ಕಾರ ಶೀಘ್ರ ಪತನ: ಡಿ ವಿ ಸದಾನಂದ ಗೌಡ

Sumana Upadhyaya

ಮಂಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ನಾಯಕರು ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿದ್ದು ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಕೂಡ ಅದನ್ನೇ ಆಶಿಸುತ್ತಿದ್ದಾರೆ. ಜನಾದೇಶವಿಲ್ಲದೆ ಬಿಜೆಪಿಯನ್ನು ದೂರವಿಡಬೇಕೆಂಬ ಏಕೈಕ ಉದ್ದೇಶದಿಂದ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್‌ -ಜೆಡಿಎಸ್‌ ನಾಯಕರ ನಡುವೆ ತೆರೆಮರೆಯಲ್ಲಿ ಕುರ್ಚಿಗಾಗಿ ಕಿತ್ತಾಟ, ಮಂತ್ರಿ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ. ಇವರ ಒಳಜಗಳಗಳಿಂದಾಗಿ ರಾಜ್ಯ ಸರ್ಕಾರದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಅಧಿಕಾರಿಗಳ ಮೇಲೆ ಅಂಕುಶ ಇಲ್ಲದಾಗಿದೆ. ಹೀಗಾಗಿ ಅವರು ತಮಗೆ ಬೇಕಾದಂತೆ ಆರಾಮವಾಗಿ ಇದ್ದಾರೆ ಎಂದರು.

ಮಳೆಗೆ ಮುಂಚಿತವಾಗಿ ಯಾವುದೇ ಸರ್ಕಾರದಲ್ಲಿ ಜಿಲ್ಲಾಧಿಕಾರಿಗಳು,  ಜನಪ್ರತಿನಿಧಿಗಳ, ಅಧಿಕಾರಿಗಳ ನೇತೃತ್ವದಲ್ಲಿ  ಸಭೆ ಕರೆಯಬೇಕು. 5 ರಿಂದ 10 ಕೋಟಿ ರೂಪಾಯಿ ಪರಿಹಾರಕ್ಕಾಗಿ ಮೀಸಲಿಡಬೇಕು. ಆದರೆ ಸರ್ಕಾರ ಈ ಮಳೆಗಾಲದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲಿಲ್ಲ. ಜನ ಮುಳುಗಿ ಹೋದರೆ ನಮಗೇನು ಅನ್ನುವ ಧೋರಣೆ ತಳೆದಿದೆ, ಆದರೆ ಕೆಲವೇ ದಿನಗಳಲ್ಲಿ ಇವರು ಮುಳುಗಿ ಹೋಗುತ್ತಾರೆ ಎಂದು ಟೀಕಿಸಿದರು.

ಕೇಂದ್ರದಲ್ಲಿ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮೋದಯವರನ್ನು ಸೋಲಿಸಲು ತೃತೀಯ ರಂಗ ರಚನೆ ಮಾಡುವುದು ಕೇವಲ ಕನಸು. ತೃತೀಯ ರಂಗ ಹರಿದ ಬಟ್ಟೆಯಂತೆ, ಒಂದು ಕಡೆ ಸೂಜಿ ಹಿಡಿದು ಹೊಲಿದರೆ ಇನ್ನೊಂದು ಕಡೆ ಹರಿಯುತ್ತಿದೆ. ಈಗ ಸಣ್ಣ ಸಣ್ಣ ತೂತುಗಳನ್ನು  ಹೊಲಿಯಲಾಗಿದ್ದು ಇನ್ನೊಂದು ಕಡೆ ದೊಡ್ಡದಾಗಿ ಹರಿಯುತ್ತದೆ ಎಂದು ಲೇವಡಿ ಮಾಡಿದರು.

SCROLL FOR NEXT