ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ನಾನು ಭಾವುಕ ವ್ಯಕ್ತಿ, ಹಾಗಾಗಿ ಕಣ್ಣೀರು ಬಂತು, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ: ಹೆಚ್ ಡಿ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಎಷ್ಟು ಕಷ್ಟ ಎಂದು ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರು ಹಾಕಿ ಸುದ್ದಿಯಾದ ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ...

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
Sumana Upadhyaya
Updated On : 19 Jul 2018, 11:29 am

ನವದೆಹಲಿ: ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಕಷ್ಟವಾಗುತ್ತಿದೆ ಎಂದು ಇತ್ತೀಚೆಗೆ ಪಕ್ಷದ ಸಭೆಯಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರು ಹಾಕಿ ಸುದ್ದಿಯಾದ ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇದೀಗ ಮೈತ್ರಿ ಪಕ್ಷ ಕಾಂಗ್ರೆಸ್ ತಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಸರ್ಕಾರದಲ್ಲಿ ಆಡಳಿತ ನಡೆಸಲು ಯಾವುದೇ ಅಡೆತಡೆಗಳಿಲ್ಲ. ಕೆಲವು ಜನರು ವೈಯಕ್ತಿಕ ಅಜೆಂಡಾವನ್ನಿಟ್ಟುಕೊಂಡು ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ, ಸಮಸ್ಯೆಗಳಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ವಿಶೇಷ ಸಂದರ್ಶನ ನೀಡಿರುವ ಹೆಚ್ ಡಿ ಕುಮಾರಸ್ವಾಮಿ  ಹೀಗೆ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳು ಚೆನ್ನಾಗಿದ್ದೇವೆ. ಕೆಲವು ಗುಂಪು ನಮ್ಮ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುಳ್ಳು ವದಂತಿ ಹಬ್ಬಿಸುತ್ತಿದೆ. ಅದು ಸರಿಯಲ್ಲ, ನನಗೆ ಬೇಸರ ತರಿಸುವ ವಿಷಯವೆಂದರೆ, ಸಮಾಜದ ಒಂದು ವರ್ಗ ಮತ್ತು ಮಾಧ್ಯಮಗಳು ಕೂಡ ಸೇರಿದಂತೆ ಜನರಿಗೆ ಅನಗತ್ಯವಾಗಿ ತಪ್ಪು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ನಾನು ಉತ್ತಮ ಕೆಲಸ ಮಾಡುತ್ತಿದ್ದರೂ ಕೂಡ ಏಕೆ ಅದನ್ನು ಸ್ವೀಕರಿಸುತ್ತಿಲ್ಲ? ಅದು ನನ್ನ ಆತಂಕ, ಬೇಸರಗಳಿಗೆ ಕಾರಣವಾಗಿದೆ. ಇಲ್ಲದಿದ್ದರೆ ಯಾವುದೇ ಸಮಸ್ಯೆಯಿಲ್ಲ, ಸಮ್ಮಿಶ್ರ ಸರ್ಕಾರ ಸುಗಮವಾಗಿ ನಡೆದುಕೊಂಡು ಹೋಗುತ್ತಿದೆ. ಬಹುಮತ ಪಡೆದ ಏಕೈಕ ಪಕ್ಷ ಕೂಡ ಸರ್ಕಾರ ನಡೆಸುವಾಗ ಸಮಸ್ಯೆಗಳು ಬರುವುದಿಲ್ಲವೇ? ಅಷ್ಟಕ್ಕೂ ಇದು ಮೈತ್ರಿ ಸರ್ಕಾರ.

-ಇತ್ತೀಚೆಗೆ ಪಕ್ಷದ ಸಭೆಯಲ್ಲಿ ನಾನು ಭಾವುಕನಾಗಿದ್ದು ಹೌದು, ನಾನು ಕೂಡ ಮನುಷ್ಯ, ನನಗೂ ಭಾವನೆಗಳಿವೆ ಏನಾದರೂ ತೊಂದರೆ, ಸಮಸ್ಯೆಗಳು ಎದುರಾದಾಗ ನಾನು ಭಾವುಕನಾಗುತ್ತೇನೆ. ನನ್ನ ಜೀವನದಲ್ಲಿ ಇಂತಹ ಗಳಿಗೆಗಳು ಹಲವು ಸಲ ಬಂದಿವೆ. ನನ್ನ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ನನ್ನ ಮನಸ್ಸಿನೊಳಗಿರುವುದನ್ನು ಮುಕ್ತವಾಗಿ ಹೇಳಿದ್ದೇನೆ. ನನ್ನ ಪಕ್ಷದ ಕಾರ್ಯಕರ್ತರು ನನಗೆ ಕುಟುಂಬದವರಂತೆ. ಅವರಲ್ಲಿ ನನ್ನ ಭಾವನೆಗಳನ್ನು ಹೇಳಿಕೊಳ್ಳದೆ ಮತ್ತಿನ್ನಾರಲ್ಲಿ ಹೇಳಿಕೊಳ್ಳಲಿ? ನನ್ನನ್ನು ಟೀಕೆ ಮಾಡುವವರಿಗೆ ಮಾನವ ಸಹಜ ಭಾವನೆಗಳಿಲ್ಲ. ವಿಷ ಎಂದು ನಾನು ಪ್ರಸ್ತಾಪ ಮಾಡಿದ್ದು ಕಾಂಗ್ರೆಸ್ ಬಗ್ಗೆ ಅಥವಾ ಮೈತ್ರಿ ಸರ್ಕಾರದ ಬಗ್ಗೆ ಅಲ್ಲ, ಅದು ಈ ರಾಜ್ಯದ ಜನತೆಗೆ ನಾನು ಕೊಟ್ಟಿರುವ ಭರವಸೆಗಳನ್ನು ಸರಿಯಾಗಿ ಈಡೇರಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂದು. ನಾನು ಮುಖ್ಯಮಂತ್ರಿಯಾದದ್ದು ಇಷ್ಟವಿಲ್ಲದ ಸಮಾಜದ ಒಂದು ವರ್ಗ ನೀಡಿರುವ ವಿಷವನ್ನು ನಾನು ಕುಡಿಯುತ್ತೇನೆ ಎಂದು ಹೇಳಿರುವುದು.

-ಸಮ್ಮಿಶ್ರ ಸರ್ಕಾರದಲ್ಲಿ ಹೇಗೆ ಆಡಳಿತ ನಡೆಸಬೇಕೆಂದು ಪತ್ರದ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ಸಲಹೆ ನೀಡಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುತ್ತೇನೆ, ಆ ವಿಷಯವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ, ಕೆಲವರು ವೈಯಕ್ತಿಕ ಅಜೆಂಡಾವನ್ನು ಇಟ್ಟುಕೊಂಡು ನನ್ನ ಬಗ್ಗೆ ಟೀಕೆ ಮಾಡುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ.

-ಈ ಸಮ್ಮಿಶ್ರ ಸರ್ಕಾರ 5 ವರ್ಷ ಉಳಿಯುತ್ತದೆ ಮತ್ತು ಸ್ಥಿರ ಆಡಳಿತ ನೀಡುತ್ತದೆ. ಕಾಂಗ್ರೆಸ್ ಪಕ್ಷದ ಇಚ್ಛೆ ಕೂಡ ಉತ್ತಮ ಆಡಳಿತವನ್ನು ಈ ರಾಜ್ಯದ ಜನತೆಗೆ ನೀಡಬೇಕು ಎಂಬುದಾಗಿದೆ.

-ದೇಶದ ಜನತೆ ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಕೂಡ ಇಂತಹ ಮೈತ್ರಿ ಬೇಕೆಂದು ಬಯಸುತ್ತಿದ್ದಾರೆ. ದೇಶದ ಜನರು ಎನ್ ಡಿಎ ಸರ್ಕಾರದ ಆಡಳಿತ ನೋಡಿದ್ದಾರೆ. ಅವರಿಗೆ ಕೇಂದ್ರ ಸರ್ಕಾರದ ಬಗ್ಗೆ ಬೇಸರವಿದೆ. ಇಂತಹ ಮೈತ್ರಿಯ ತುರ್ತು ಅವಶ್ಯಕತೆ ದೇಶಕ್ಕೆ ಬೇಕಾಗಿದೆ. ಕರ್ನಾಟಕದ ಈಗಿನ ಸಮ್ಮಿಶ್ರ ಸರ್ಕಾರ ಮುಂದಿನ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಕೇವಲ ಕರ್ನಾಟಕದಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ 20ರಿಂದ 25 ಸೀಟು ಗೆಲ್ಲುವ ಗುರಿ ನಮಗಿದೆ. ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ 28 ಸೀಟುಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಗಳಿಸಿದ್ದವು.

-ರೈತರ ಸಾಲಮನ್ನಾ ವಿಚಾರದಲ್ಲಿ ರಾಜ್ಯದ ಹಣಕಾಸು ಶಿಸ್ತನ್ನು ಕಾಪಾಡುವುದು ನನಗೆ ಮುಖ್ಯವಾಗಿದೆ. ಸಾಲಮನ್ನಾಗೆ ಸೂಕ್ತ ತಯಾರಿ ಮಾಡಿಕೊಂಡಿದ್ದೇನೆ. ರಾಜ್ಯ ಸರ್ಕಾರದ ಬೊಕ್ಕಸದ ಪರಿಸ್ಥಿತಿ ಬಗ್ಗೆ ಚೆನ್ನಾಗಿ ಅರಿವಿದೆ. ರಾಜ್ಯ ಸರ್ಕಾರದಲ್ಲಿ ಹೆಚ್ಚುವರಿ ಬಜೆಟ್ ಇದೆ, ಕೊರತೆಯಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement