ಬಿ.ಎನ್ ಪ್ರಹ್ಲಾದ್ ಮತ್ತು ಸೌಮ್ಯ ರೆಡ್ಡಿ
ಬೆಂಗಳೂರು: ಜೂನ್ 11 ರಂದು ಜಯನಗರ ವಿಧಾನ ಸಭೆ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ರಾಜ್ಯ ಸರ್ಕಾರದಿಂದ ಪ್ರಭಾವಿಸುವ ಯಾವ ಅಂಶವೂ ಇಲ್ಲಿ ಕೆಲಸ ಮಾಡುವುದಿಲ್ಲ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಕ್ಕೂ ಕ್ಷೇತ್ರದಲ್ಲಿ ಕಠಿಣವಾಗಿದೆ.
ವಿಧಾನಸಭೆಯಲ್ಲಿ ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು 2 ಪಕ್ಷಗಳು ಪ್ರಯತ್ನಿಸುತ್ತಿವೆ, ಬಿಜೆಪಿ ಅಭ್ಯರ್ಥಿ ಬಿ.ಎನ್ ವಿಜಯ್ ಕುಮಾರ್ ಅವರ ನಿಧನದಿಂದಾಗಿ ಜಯನಗರ ಕ್ಷೇತ್ರದ ಚುನಾವಣೆ ದಿನಾಂಕ ಮುಂದೂಡಲಾಗಿತ್ತು.
ಕ್ಷೇತ್ರ ಪುನರ್ ವಿಂಗಡನೆಯಾದ ಬಳಿಕ ವಿಜಯ್ ಕುಮಾರ್ ಈ ಕ್ಷೇತ್ರದಿಂದ 2 ಬಾರಿ ಗೆಲುವು ಸಾಧಿಸಿ ಈ ಬಾರಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರು, ಆದರೆ ವಿಧಿಯಾಟವೇ ಬೇರೆಯಾಗಿತ್ತು,. ವಿಜಯ್ ಕುಮಾರ್ ಅವರ ಸಹೋದರ ಬಿ.ಎನ್ ಪ್ರಹ್ಲಾದ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದು, ಸಾಮಾಜಿಕ ಮಾಧ್ಯಮದ ಮೂಲಕ ನಡೆಸಿದ ಪ್ರಚಾರದಿಂದಾಗಿ ಕ್ಷೇತ್ರದಲ್ಲಿ ಪ್ರಹ್ಲಾದ್ ಪರ ಸಹಾನೂಭೂತಿ ಅಲೆ ಇದೆ.
ಇನ್ನೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.. ಜಯನಗರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದ ರಾಮಲಿಂಗಾರೆಡ್ಡಿ ತಮ್ಮ ಪುತ್ರಿಗಾಗಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟು, ಬಿಟಿಎಂ ಲೇಔಟ್ ಗೆ ಶಿಫ್ಟ್ ಆದರು. ಈ ಬಾರಿ ವಿಜಯ್ ಕುಮಾರ್ ಅವರಿಗೆ ಜಯ ಎಂದು ಬಿಜೆಪಿ ಬಾವಿಸಿತ್ತು, ಆದರೆ ಅವರ ನಿಧನದಿಂದಾಗಿ ಸ್ಥಳೀಯ ಕಾರ್ಪೋರೇಟರ್ಸ್ ಅವರ ಸಹೋದರ ಪ್ರಹ್ಲಾದ್ ಅವರನ್ನು ಅಭ್ಯರ್ಥಿಯನ್ನಾಗಿಸುವಂತೆ ಒತ್ತಾಯಿಸಿದ್ದರು.
ಆದರೆ ಈಗ ಬಿಜೆಪಿಗೆ ಕ್ಷೇತ್ರ ಕಳೆದುಕೊಳ್ಳುವ ಭಯ ಕಾಡುತ್ತಿದೆ. ಬಿಜೆಪಿ ಮುಖಂಡರು ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಬಂದಾಗ ಸ್ಥಳೀಯ ಕಾರ್ಪೋರೇಟರ್ ಪ್ರಹ್ಲಾದ್ ಅವರನ್ನು ಆಯ್ಕೆ ಮಾಡಿದರು. ನಮ್ಮ ಕುಟುಂಬಸ್ಥರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇಲ್ಲದಿದ್ದರೇ ತಾವೇ ಸ್ಪರ್ಧಿಸುವುದಾಗಿ ಕಾರ್ಪೋರೇಟರ್ ಒಬ್ಬರು ಹೇಳಿದ್ದರು ಎಂದು ಪ್ರಹ್ಲಾದ್ ತಿಳಿಸಿದ್ದಾರೆ.
ಯುವ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ವಿಧಾನ ಸೌಧ ತಲುಪುವ ಹಾದಿ ಅಷ್ಟು ಸುಗಮವಾಗಿಲ್ಲ, ತಂದೆಯ ಹೆಸರಿನ ಆಧಾರದ ಮೇಲೆ ಸೌಮ್ಯ ರೆಡ್ಡಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ, ಜಯನಗರ ಬಿಜೆಪಿಯ ಭದ್ರಕೋಟೆಯಾಗಿದೆ,
ಇನ್ನೂ ಜೆಡಿಎಸ್ ಅಭ್ಯರ್ಥಿ ಕಾಳೆಗೌಡ ಅವರಿಗೂ ಕಷ್ಟವಾಗಿದೆ, ಪಕ್ಷೇತರ ಅಭ್ಯರ್ಥಿ ರವಿ ಕೃಷ್ಣಾ ರೆಡ್ಡಿ, ಕಳೆದ 7 ತಿಂಗಳಿಂದಲೂ ಪ್ರಚಾರ ನಡೆಸುತ್ತಿದ್ದಾರೆ, ಇದೊಂದು ಕಠಿಣ ಸ್ಪರ್ಧೆಯಾಗಿದ್ದು, ಇಲ್ಲಿನ ಜನ ಪಕ್ಷಕ್ಕಿಂತ ವ್ಯಕ್ತಿಗಳಿಗೆ ಮಹತ್ವ ನೀಡಿ ಮತ ಹಾಕುತ್ತಾರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಅನಂತ್ ಕುಮಾರ್ ಅವರಷ್ಟೇ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಮತ ಪಡೆದಿದ್ದರು.