ಎಚ್.ಡಿ ಕುಮಾರ ಸ್ವಾಮಿ, ಜಿ, ಪರಮೇಶ್ವರ್ ಮತ್ತು ಡಿ.ಕೆ ಶಿವಕುಮಾಕ್
ಬೆಂಗಳೂರು: ಗಜ ಪ್ರಸವದಂತಾಗಿದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಅಂತೂ ನೆರವೇರಿದೆ, ಒಟ್ಟು 25 ಶಾಸಕರು ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಾಯಕರ ಚಿತ್ತ ಈಗ ಖಾತೆ ಹಂಚಿಕೆಯತ್ತ ತಿರುಗಿದೆ.
ಯಾರಿಗೆ ಯಾವ ಖಾತೆ ಎಂಬುದರ ಬಗ್ಗೆ ಇಂದು ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಈ ಮೊದಲು ಇಂಧನ ಖಾತೆ ತನ್ನ ಬಳಿಯೇ ಇಟ್ಟುಕೊಂಡಿದ್ದ ಜೆಡಿಎಸ್ ಅದನ್ನು ಬದಲಾಯಿಸಿಕೊಂಡು ಅದಕ್ಕೆ ಸರಿಸಮವಾದ ಖಾತೆ ಪಡೆದುಕೊಳ್ಳುವ ಸಾಧ್ಯತೆಯಿದೆ. ಹಾಗೇನಾದರೂ ಆದರೆ ಇಂಧನ ಖಾತೆ ಒಕ್ಕಲಿಗರ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಅವರಿಗೆ ಸಿಗಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಹಾಗಾಗಿದಿದ್ದರೇ ಶಿವಕುಮಾರ್ ಗ ಜಲ ಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಖಾತೆ ದೊರೆಯಲಿದೆ ಎನ್ನಲಾಗುತ್ತಿದೆ.
ಇನ್ನೂ ಗೃಹಖಾತೆಯನ್ನು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ತಮ್ಮ ಬಳಿಯೇ ಇರಿಸಿಕೊಳ್ಳಲಿದ್ದಾರೆ, ಮುಖ್ಯಮಂತ್ರಿ ಕುಮಾರ ಸ್ವಾಮಿ ಹಣಕಾಸು ಮತ್ತು ಅಬಕಾರಿ ಖಾತೆಗಳ ಹೊಣೆ ನಿರ್ಹಹಿಸಲಿದ್ದಾರೆ.
ಐಟಿ-ಬಿಟ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಗೆ ವಸತಿ ಜೊತೆಗೆ ಸಮಾಜ ಕಲ್ಯಾಣ ಇಲಾಖೆ, ಯುಟಿ ಖಾದರ್ ಗೆ ನಗರಾಭಿವೃದ್ಧಿ, ಕೆ.ಜೆ ಜಾರ್ಜ್ ಗೆ ಬೃಹತ್ ಕೈಗಾರಿಕೆ ಹಾಗೂ ಆರ್ .ವಿ ದೇಶಪಾಂಡೆಗೆ ಕಂದಾಯ ಖಾತೆ ವಹಿಸುವ ಸಾಧ್ಯತೆಗಳಿವೆ.
ಇನ್ನೂ ಸಂಪುಟದಲ್ಲಿರುವ ಏಕೈಕ ಮಹಿಳಾ ಸಚಿವೆ ಜಯಮಾಲಾ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಲಾಗುವುದು ಎಂದು ತಿಳಿದು ಬಂದಿದೆ. ಕಾಂಗ್ರೆಸ್ ನ ಜಮೀರ್ ಅಹಮದ್ ಖಾನ್ ಗೆ ಅಲ್ಫಸಂಖ್ಯಾತ ಕಲ್ಯಾಣ ಮತ್ತು ವಕ್ಫ್, ಎಚ್ ಡಿ ರೇವಣ್ಣಗೆ ಇಂಧನ ಮತ್ತು ಲೋಕೋಪಯೋಗಿ ಖಾತೆ, ಹಾಗೂ ಜ.ಟಿ ದೇವೇಗೌಡ ಅವರಿಗೆ ಸಹಕಾರ ಖಾತೆ ನೀಡಲಾಗುವುಗು ಎಂದು ನಿರೀಕ್ಷಿಸಲಾಗಿದೆ, ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಅವರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಜವಾಬ್ದಾರಿ ನೀಡಲಾಗುವುದು ಎಂದು ತಿಳಿದು ಬಂದಿದೆ.