ದಿನೇಶ್ ಗುಂಡೂರಾವ್,. ಈಶ್ವರ್ ಖಂಡ್ರೆ ಮತ್ತು ಎಂ ಕೃಷ್ಣಪ್ಪ
ಬೆಂಗಳೂರು: 2019 ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಹುದ್ದೆ ಅಧ್ಯಕ್ಷರ ನೇಮಕ ಕುರಿತಂತೆ ಕಾಂಗ್ರೆಸ್ ಹೈ ಕಮಾಂಡ್ ಚಿಂತನೆ ನಡೆಸಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮುಂಚೂಣಿಯಲ್ಲಿದ್ದಾರೆ. ಪಕ್ಷ ಸಂಘಟನೆ ಚತುರತೆ ಹಾಗೂ ಕ್ಲೀನ್ ಇಮೇಜ್ ದಿನೇಶ್ ದೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ, ಪಕ್ಷದ ಹೈ ಕಮಾಂಡ್ ಗೆ ದಿನೇಶ್ ಕಾರ್ಯಶೈಲಿ ಮೆಚ್ಚುಗೆಯಾಗಿದೆ, ಮಾಜಿ ಸಿಎಂ ಗುಂಡೂರಾವ್ ಅವರ ಪುತ್ರನಾಗಿರುವ ದಿನೇಶ್ ಬಗ್ಗೆ ಪಕ್ಷದಲ್ಲಿ ಮೂಲ ಹಾಗೂ ವಲಸಿಗ ಕಾಂಗ್ರೆಸಿಗರೆಲ್ಲರ ವಿಶ್ವಾಸ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ದೆಹಲಿಗೆ ತೆರಳಿದ್ದ ವೇಳೆ ರಾಹುಲ್ ಗಾಂಧಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಂಬಂಧಿಸಿದಂತೆ ದಿನೇಶ್ ಜೊತೆ ಚರ್ಚಿಸಿದ್ದರು. ಖಾತೆ ಹಂಚಿಕೆ ಮುಗಿದ ನಂತರ ಹೈಕಮಾಂಡ್ ಕೆಪಿಸಿಸಿ ಹುದ್ದೆ ಆಯ್ಕೆ ಸಂಬಂಧ ಚರ್ಚಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ,
ಆದರೆ ಇಲ್ಲಿ ಜಾತಿ ಲೆಕ್ಕಾಚಾರ ಹೆಚ್ಚಿನ ಕೆಲಸ ಮಾಡುತ್ತದೆ. ದಿನೇಶ್ ಗುಂಡೂರಾವ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಇತ್ತೀಚೆಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಮತಗಳು ವಿಭಜನೆಯಾಗಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಅಥವಾ ಲಿಂಗಾಯತರಿಗೆ ಕೆಪಿಸಿಸಿ ಹುದ್ದೆ ನೀಡಲು ಹೈಕಮಾಂಡ್ ನಿರ್ಧರಿಸಲಿದೆ. ಲಿಂಗಾಯತ ಪ್ರಭಾವಿ ನಾಯಕ ಈಶ್ವರ್ ಖಂಡ್ರೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ,
ಇವರ ಜೊತೆಗೆ ಮಾಜಿ ಸಚಿವ ಹಾಗೂ ವಿಜಯನಗರದ ಒಕ್ಕಲಿಗ ಶಾಸಕ ಎಂ ಕೃಷ್ಣಪ್ಪ ಕೂಡ ಆಕಾಂಕ್ಷಿಯಾಗಿದ್ದಾರೆ,. ಜೊತೆಗೆ ಈಡಿಗ ಸಮುದಾಯದ ಬಿ.ಕೆ ಹರಿಪ್ರಸಾದ್ ಹೆಸರು ಕೂಡ ಕೇಳಿ ಬರುತ್ತಿದೆ.