ಕಾಂಗ್ರೆಸ್ ಒಳಜಗಳದಲ್ಲಿ 'ದಳಪತಿ' ಮೂಗು ತೂರಿಸಿದ್ದೇಕೆ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವ ಬಲಹೀನವಾಗುತ್ತಿದೆಯೇ , ಹಿಗೋಂದು ಪ್ರಶ್ನೆ ಎಲ್ಲರಲ್ಲೂ ಮೂಡಲು ಕಾರಣವಿದೆ, ಅದೇನೆಂದರೇ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲವೆಂದು ಅಸಮಾಧಾನಗೊಂಡಿರುವ ಎಂಬಿ ಪಾಟೀಲ್ ನಿವಾಸಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿ, ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ನೀಡಿರುವುದು ಈ ಪ್ರಶ್ನೆ ಮೂಡಲು ಕಾರಣವಾಗಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಎಂಬಿ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಕುಮಾರ ಸ್ವಾಮಿ ಅವರ ಜೊತೆ ಚರ್ಚಿಸಿ, ತಮ್ಮ ಅಸಮಾಧಾನದ ಬಗ್ಗೆ ಕೇಂದ್ರ ನಾಯಕರ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದ್ದು ವಿಪರ್ಯಾಸವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಪ್ರವಾಸದಲ್ಲಿದ್ದು, ತಮಗೆ ಮತ ನೀಡಿ ಗೆಲ್ಲಿಸಿದ ಜನರಿಗೆ ಧನ್ಯಾವಾದ ಹೇಳಲು ಬಾದಾಮಿಗೆ ತೆರಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಜಿ ಪರಮೇಶ್ವರ್,ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಮಾಧಾನ ಪಡಿಸಲು ಯತ್ನಿಸಿ ವಿಫಲರಾಗಿದ್ದಾರೆ. ಆದರೆ ಪಕ್ಷದ ಹೈಕಮಾಂಡ್ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ನಿಧಾನ ಮಾಡುತ್ತಿದೆ.
ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಜೆಡಿಎಸ್ ಮೂಗು ತೂರಿಸುತ್ತಿರುವುದು ದುರಾದೃಷ್ಟಕರ. ಪರಿಸ್ಥಿತಿ ಈ ಹಂತ ತಲುಪಲು ನಮ್ಮ ಪಕ್ಷದ ನಾಯಕರು ಬಿಡಬಾರದಿತ್ತು ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಸಂಪುಟ ವಿಸ್ತರಣೆ ನಂತರ ಬುಧವಾರದಿಂದ ಭಿನ್ನಮತ ಮತ್ತಷ್ಟು ಹೆಚ್ಚಾಯಿತು, ಶುಕ್ರವಾರ ದೆಹಲಿಗೆ ಬರುವಂತೆ ಹೈಕಮಾಂಡ್ ಎಂಬಿ ಪಾಟೀಲ್ ಗೆ ಬುಲಾವ್ ನೀಡಿದೆ, ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಆಗದಿರಲಿ ಎಂದು ಸಿಎಂ ಕುಮಾರ ಸ್ವಾಮಿ ಎಂಬಿ ಪಾಟೀಲ್ ನಿವಾಸಕ್ಕೆ ಆಗಮಿಸಿದ್ದರು. ಕುಮಾರ ಸ್ವಾಮಿ ಹಸ್ತಕ್ಷೇಪ, ಪ್ರಕರಣವನ್ನು ಸರಿಪಡಿಸುವಲ್ಲಿ ರಾಜ್ಯ ಕಾಂಗ್ರೆಸ್ ವಿಫಲವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಪಟ್ಟದಿಂದ ಕೆಳಗಿಳಿಜದ ನಂತರ ರಾಜ್ಯ ಕಾಂಗ್ರೆಸ್ ನಾಯಕತ್ವ ಬಲಹೀನವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಪಕ್ಷದೊಳಗಿನ ಆಂತರಿಕ ಭಿನ್ನಮತ ಗಂಭೀರ ಬೆಳವಣಿಗೆ. ಪಕ್ಷದೊಳಗಿನ ತಾರತಮ್ಯ ನೀತಿ ಪ್ರತ್ಯಕ್ಷವಾಗಿ ಹೊರ ಬಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಭಿನ್ನಮತ ನಿಯಂತ್ರಣದಲ್ಲಿತ್ತು. ಆದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತದ ಆಕ್ರೋಶ ಕಟ್ಟೆಯೊಡಿದಿದೆ.
ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಸಮನ್ವಯ ಸಮಿತಿ ಮುಖಂಡರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಡಿಸಿಎಂ ಆಗಿದ್ದಾರೆ.ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್ ಆರ್ ಪಾಟೀಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ, ಮತ್ತೊಬ್ಬ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ, ಹೀಗಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಯಾರು ತೆಗೆದುಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ, ಕಾಂಗ್ರೆಸ್ ನಾಯಕರು ಎಐಸಿಸಿ ಪ್ರದಾನ ಕಾರ್ಯದರ್ಶಿ ಕೆ.ಸಿ ವೇಣಗೋಪಾಲ್ ಮಧ್ಯಸ್ಥಿಕೆಗಾಗಿ ಕಾಯುತ್ತಿದ್ದಾರೆ.
ಕುಮಾರ ಸ್ವಾಮಿ ಎಂಬಿ ಪಾಟೀಲ್ ಮನೆಗೆ ತೆರಳಿದ್ದು ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವ ಸಲುವಾಗಿ ಹೊರತು ಕಾಂಗ್ರೆಸ್ ರಕ್ಷಿಸಲು ಅಲ್ಲ, ಕೇಂದ್ರ ನಾಯಕರು ಮದ್ಯ ಪ್ರವೇಶಿಸಿ ರಾಜ್ಯ ಕಾಂಗ್ರೆಸ್ ಭಿನ್ನಮ್ತ ಸರಿದೂಗಿಸಬೇಕು ಎಂಬುದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಅಭಿಮತ.
ಕಡಿಮೆ ಸೀಟು ಪಡೆದಿರುವ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸಂಪುಟಕ್ಕೆ ಹಿರಿಯರನ್ನು ಬಿಟ್ಟು ಹೊಸಮುಖಗಳನ್ನು ಸೇರಿಸಿದೆ, ತಮ್ಮದೇ ಬಹುಮತದ ಸರ್ಕಾರವಿದ್ದಾಗ ಈ ಐಡಿಯಾ ಉಪಯೋಗವಾಗುತ್ತಿತ್ತು, ಸಮ್ಮಿಶ್ರ ಸರ್ಕಾರದಲ್ಲಿ ಅಲ್ಲ ಎಂದು ಅವರು ಹೇಳಿದ್ದಾರೆ.