ರಾಜಕೀಯ

ಖಾತೆ ಹಂಚಿಕೆ: ಇಬ್ಬರು ಜೆಡಿಎಸ್ ಸಚಿವರಿಗೆ ಅಸಮಾಧಾನ

Raghavendra Adiga
ಬೆಗಳೂರು: ಸಮ್ಮಿಶ್ರ ಸರ್ಕಾರದ ಖಾತೆ ಹಂಚಿಕೆಯಾದ ಮೇಲೆ ಸಹ ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನ ಕೊನೆಯಾಗಿಲ್ಲ. ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್ ಅಸಮಾಧಾನದ ಬೆನ್ನಲ್ಲಿಯೇ ಈಗ ಜೆಡಿಎಸ್ ಶಾಸಕರಲ್ಲಿ ಸಹ ಭಿನ್ನಾಭಿಪ್ರಾಯದ ಹೊಗೆಯಾಡುತ್ತಿದೆ.
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಜಿ.ಟಿ ದೇವೇಗೌಡ ಹಾಗೂ ಸಿ.ಎಸ್. ಪುಟ್ಟರಾಜು ತಮಗೆ ಸಿಕ್ಕ ಖಾತೆಗಳ ಕುರಿತಂತೆ ಅಸಮಾಧಾನ ಹೊರಹಾಕಿದ್ದಾರೆ.
ಉನ್ನತ ಶಿಕ್ಷಣ ಸಚಿವರಾದ ಜಿಟಿ ದೇವೇಗೌಡ "ಜನರೊಡನೆ ಬೆರೆತು ಕಾರ್ಯನಿರ್ವಹಿಸಬಹುದಾದ ಖಾತೆ ದೊರಕುವುದೆಂದು ಆಶಿಸಿದ್ದೆ. ಸಾರಿಗೆ ಅಥವಾ ಕಂದಾಯ ಖಾತೆ ಸಿಗುವುದೆನ್ನುವ ವಿಶ್ವಾಸವಿತ್ತು. ಆದರೆ ಕಾಲೇಜು ಮೆಟ್ಟಿಲನ್ನೇ ಹತ್ತದ ನನಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ." ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೇ 12ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಜಿಟಿ ದೇವೇಗೌಡ ಹಾಗೂ ಲೋಕಸಭಾ ಸ್ಥಾನ ತೊರೆದು ಮೇಲುಕೋಟೆ ಕ್ಷೇತ್ರದಿಂದ ಶಾಸಕರಾದ ಪುಟ್ಟರಾಜು ತಮಗೆ ದೊರೆತ ಖಾತೆ ಸಂಬಂಧ ಬೇಸರ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಮುಖ್ಯಸ್ಥರಾದ ಎಚ್.ಡಿ. ದೇವೇಗೌಡ ಸಂಬಂಧಿಯಾದ ಡಿ. ಸಿ. ತಮ್ಮಣ್ಣ  ಅವರಿಗೆ ಸಾರಿಗೆ ಇಲಾಖೆ ವಹಿಸಿರುವುದು ಸಹ ಹಿರಿಯ ಶಾಸಕರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಏತನ್ಮಧ್ಯೆ ಮಂತ್ರಿಗಳಿಬ್ಬರ ಬೆಂಬಲಿಗರು ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದು ತಮ್ಮ ನಾಯಕರಿಗೆ ಪ್ರಮುಖ ಖಾತೆಗಳನ್ನು ನೀಡುವಂತೆ ಒತ್ತಾಯಿಸಿದ್ಡಾರೆ.
ಮಂತ್ರಿಗಳ ಅಸಮಾಧಾನದ ವಿಚಾರವಾಗಿ ಪ್ರತಿಕ್ರಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ "ಸಚಿವರ ಅತೃಪ್ತಿಯ  ಕುರಿತಂತೆ ಮಾದ್ಯಮಗಳಲ್ಲಿ ವರದಿ ನೋಡಿದ್ದೇನೆ. ಆದರೆ ಯಾರೊಬ್ಬರೂ ನನ್ನನ್ನು ಭೇಟಿಯಾಗಿ ಈ ಕುರಿತಂತೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿಲ್ಲ" ಎಂದಿದ್ದಾರೆ.
"ಕೆಲವರು ತಮಗೆ ಇಂತಹುದೇ ಖಾತೆ ಬೇಕೆಂದು ಬಯಸುತ್ತಾರೆ. ಆದರೆ ಪ್ರತಿ ಇಲಾಖೆಗಳಲ್ಲೂ ಪರಿನಾಮಕಾರಿಯಾಗಿ ಕೆಲಸ ಮಾಡಲು ಅವಕಾಶವಿದೆ. ನಾವು ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು
"ಕೆಲಸ ಮಾಡಬೇಕೆಂದರೆ ಯಾವ ಖಾತೆಯಾದರೇನು? ಉನ್ನತ ಶಿಕ್ಷಣ,  ಸಣ್ಣ ನೀರಾವರಿಗಿಂತ ಬೇರೆ ಖಾತೆ ಬೇಕೆ? ಇಷ್ಟಕ್ಕೂ ಖಾತೆ ಹಂಚಿಕೆ ಎನ್ನುವುದು ಪಕ್ಷದ ಆಂತರಿಕ ತೀರ್ಮಾನ. 
"ನಾನೇನು ಕಲಿತಿದೇನೆ? ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿಲ್ಲವೆ? ಹಣಕಾಸು ಸಚಿವ ಸ್ಥಾನ ನನಗೆ ಬೇಡ ಎನ್ನಲೆ? "ಮುಖ್ಯಮಂತ್ರಿಗಳು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಶಾಸಕರ ನಡುವೆ ತೀವ್ರ ಪೈಪೋಟಿಯ ಬಳಿಕ ಶುಕ್ರವಾರ ರಾತ್ರಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
SCROLL FOR NEXT