ಬಾಗಲಕೋಟೆ: ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಪಕ್ಷದಲ್ಲಿ ಕಾಣಿಸಿಕೊಂಡಿರುವ ಭಿನ್ನಮತ ಕುರಿತು ಹೈಕಮಾಂಡ್ ಜತೆ ಚರ್ಚಿಸಿ, ಪರಿಹರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.
ಇಂದು ಬಾಗಲಕೋಟೆ ಜಿಲ್ಲೆಯ ನೀಲಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ಭಿನ್ನಮತೀಯ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ದಿನಕ್ಕೆ ಮೂರು ಬಾರಿ ಫೋನ್ ಮೂಲಕ ಮಾತನಾಡಿದ್ದೇನೆ. ಎಲ್ಲರೂ ಸಮಾಧಾನ ಆಗಿದ್ದು, ಯಾವುದೇ ಅತೃಪ್ತಿ ಇಲ್ಲ ಎಂದರು.
ಈಗ ಸಚಿವರಾಗಿರುವವರಿಗೆ ಎರಡು ವರ್ಷ ಅವಧಿಗೆ ಅವಕಾಶ ನೀಡಿದ್ದೇವೆ. ಮುಂದಿನ ಅವಧಿಗೆ ಉಳಿದವರಿಗೆ ಸಚಿವ ಸ್ಥಾನ ನೀಡಿ ಸಮಾಧಾನಪಡಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಹೈಕಮಾಂಡ್ ನಿಂದ ದೆಹಲಿ ಬರುವಂತೆ ನನಗೆ ಯಾವುದೇ ಬುಲಾವ್ ಬಂದಿಲ್ಲ. ಹಾಗಾಗಿ ನಾನು ದೆಹಲಿಗೆ ಹೋಗಿಲ್ಲ. ದೂರವಾಣಿ ಮೂಲಕವೇ ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಎಂದರು.