ಬೆಂಗಳೂರು: ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಕೊನೆಗೂ 15 ದಿನಗಳ ನಂತರ ಉನ್ನತ ಶಿಕ್ಷಣ ಸಚಿವರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಜಿಟಿ ದೇವೇಗೌಡ ಅವರು ಇಂದು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ಪತ್ನಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಧಿಕಾರ ವಹಿಸಿಕೊಂಡರು.
ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ನಾನು ಖಾತೆ ಬದಲಾವಣೆ ಮಾಡುವಂತೆ ಕೇಳಿರಲಿಲ್ಲ. ನನ್ನ ಶಕ್ತಿ ಮೀರಿ ಉನ್ನತ ಶಿಕ್ಷಣ ಸಚಿವನಾಗಿ ಕೆಲಸ ಮಾಡುತ್ತೇನೆ ಎಂದರು.
ಕೇವಲ 8ನೇ ತರಗತಿ ಓದಿರುವ ಜೆಟಿ ದೇವೇಗೌಡ ಅವರು ತಮಗೆ ಉನ್ನತ ಶಿಕ್ಷಣ ಖಾತೆ ಬೇಡ, ಬೇರೆ ಖಾತೆ ನೀಡಿ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದರು. ಆದರೆ ಖಾತೆ ಬದಲಾವಣೆಗೆ ಕುಮಾರಸ್ವಾಮಿ ಒಪ್ಪಿರಲಿಲ್ಲ.
ನಿನ್ನೆ ಜಿ.ಟಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದ ಸಿಎಂ ಕುಮಾರಸ್ವಾಮಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಉನ್ನತ ಶಿಕ್ಷಣ ಖಾತೆ ವಹಿಸಿಕೊಳ್ಳಲು ಜಿಟಿಡಿ ಷರತ್ತು ವಿಧಿಸಿದ್ದಾರೆ. ಮೈಸೂರು ವಿವಿ ಮಾಜಿ ಉಪ ಕುಲಪತಿ ಹಾಗೂ ಎಚ್.ಡಿ ದೇವೇಗೌಡರ ಸಂಬಂಧಿಯಾಗಿರುವ ಪ್ರೊ.ಕೆ.ಎಸ್ ರಂಗಪ್ಪ ತಮ್ಮ ಖಾತೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು, ಮೂಗು ತೂರಿಸಬಾರದು ಎಂಬ ಷರತ್ತು ಹಾಕಿದ್ದು, ಈ ಷರತ್ತಿಗೆ ಸಿಎಂ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos