ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹೆಸರನ್ನು ಸಿದ್ದರಾಮಯ್ಯ ಬದಲಿಗೆ ಸಿದ್ದರಾವಣಯ್ಯ ಎಂದು ಇಟ್ಟುಕೊಂಡರೆ ಒಳ್ಳೆಯದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯನವರಲ್ಲಿ ರಾವಣನ ಗುಣಗಳು ಹೆಚ್ಚಿವೆ. ಎಲ್ಲದಕ್ಕೂ ನಾನು, ನನ್ನಿಂದಲೇ, ಎಲ್ಲವು ನನಗೆ ಸೇರಿದ್ದು ಎಂಬ ಭಾವನೆ ಅವರಲ್ಲಿದೆ. ರಾವಣನಿಗೂ ಯಾರಿಗೂ ಕೊಡದೆ ಎಲ್ಲವನ್ನು ಕಿತ್ತುಕೊಳ್ಳುವ ಭಾವನೆ ಇತ್ತು. ಸಿದ್ದರಾಮಯ್ಯ ಕೂಡ ಮಾತು ಮಾತಿಗೂ ನಾನು, ನನ್ನಿಂದಲೇ ಎನ್ನುತ್ತಾರೆ. ಈ ಎಲ್ಲಾ ಗುಣವು ಸಿದ್ದರಾಮಯ್ಯ ಅವರಲ್ಲೂ ಇದ್ದು, ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಅವರ ಹೆಸರನ್ನು ಸಿದ್ದರಾಮಯ್ಯ ಬದಲು ಸಿದ್ದರಾವಣಯ್ಯ ಎಂದು ಇಟ್ಟುಕೊಂಡರೆ ಒಳ್ಳೆಯದು ಎಂದು ಕಿಡಿಕಾರಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, 'ಕನಿಷ್ಠ 12-13 ಸಾವಿರ ಕೋಟಿ ರೂಪಾಯಿನ್ನು ಮೂರುವರೆ ವರ್ಷದಲ್ಲಿ ಮೋದಿ ಅವರು ಕೊಟ್ಟಿದ್ದ ಅನುದಾನದಲ್ಲಿ ಯೋಜನೆಗಳನ್ನು ನಾನೇ ತಂದಿದ್ದೇನೆ. ನಾವು ತಂದಿರುವ ಯೋಜನೆಯನ್ನು ಸಿದ್ದರಾಮಯ್ಯ ತಂದಿರುವ ಯೋಜನೆಯನ್ನು ಹೋಲಿಕೆ ಮಾಡಿ ನೋಡಿ. ನಾಲ್ಕು ಕಟ್ಟಡ ಮಾಡಿ ನಾನೇ ಮೈಸೂರು ಮಹಾರಾಜ ಎಂದು ಹೇಳುತ್ತಾರೆ. ಇದಕ್ಕಿಂತ ನಗೆಪಾಟಲಿನ ವಿಚಾರ ಬೇರೊಂದಿಲ್ಲ. 150 ಕೋಟಿ ರೂ. ಜೈದೇವ್ ಆಸ್ಪತ್ರೆ, 34 ಕೋಟಿ ರೂ. ಡಿಸಿ ಆಫೀಸ್, 20 ಕೋಟಿ ರೂ. ಕಮಿಷನರ್ ಆಫೀಸ್, 50 ಕೋಟಿ ರೂ. ಮಹಾರಾಣಿ ಕಾಲೇಜು ಮತ್ತು ಹಾಸ್ಟೆಲ್ ಎಷ್ಟೆಲ್ಲಾ ಸೇರಿದರೆ ಸುಮಾರು 400 ಕೋಟಿ ರೂ. ಆಗುತ್ತದೆ. ಆದರೆ ನಾವು ರೈಲ್ವೇ ಆದಾಯದಲ್ಲಿ ಸುಮಾರು 789 ಕೋಟಿ ರೂ. ಮೈಸೂರಿಗೆ ತಂದಿದ್ದೇವೆ. ಅಷ್ಟೇ ಅಲ್ಲದೇ ಮೈಸೂರು – ಬೆಂಗಳೂರು ಡಬಲ್ ಟ್ರ್ಯಾಕ್ ಸಂಪೂರ್ಣ ಮಾಡಿಸಿ ಹೊಸ ರೈಲು ತಂದಿದ್ದೇವೆ. ಮೈಸೂರು-ಬೆಂಗಳೂರು ನಡುವೆ 8ಲೈನ್ ಹೈವೇ ಆಗುತ್ತದೆ. ಅದಕ್ಕೂ 8,600 ಕೋಟಿ ರೂ. ನಾವು ಕೇಂದ್ರ ಸರ್ಕಾರದಿಂದ ತಂದು ಕೊಟ್ಟಿದ್ದೇವೆ ಎಂದು ಸಂಸದ ಪ್ರತಾಪ್‍ಸಿಂಹ ತಿರುಗೇಟು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics