ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಜಿ. ಪರಮೇಶ್ವರ್
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಮಾರ್ಚ್ 23 ರಂದು ಚುನಾವಣೆ ನಡೆಯಲಿದ್ದು , ಕಾಂಗ್ರೆಸ್ ಮತ್ತು ಬಿಜೆಪಿಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಮಿನಿ ಸಮರಕ್ಕೆ ಅಖಾಡ ಸಿದ್ಧವಾಗಿದೆ.
ಜೆಡಿಎಸ್ ಜೊತೆಗಿನ ಮೈತ್ರಿ ನಿರಾಕರಿಸಿರುವ ಕಾಂಗ್ರೆಸ್ ತನ್ನ ಪಕ್ಷದ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ತಮ್ಮ ಮೂವರು ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂಬ ಭರವಸೆ ವ್ಯಕ್ತ ಪಡಿಸಿದೆ.
ಎಐಸಿಸಿ ವಕ್ತಾರ ನಾಸೀರ್ ಹುಸೇನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ಜಿ. ಸಿ. ಚಂದ್ರಶೇಖರ್ ಅವರನ್ನು ಸ್ಪರ್ಧೆಗಿಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಇನ್ನೂ ಬಿಜೆಪಿ ರಾಜೀವ್ ಚಂದ್ರಶೇಖರ್ ಅವರನ್ನು ಕಣಕ್ಕಿಸಿದೆ, ಜೆಡಿಎಸ್ ಈಗಾಗಲೇ ಬಿ ಎಂ ಫಾರುಕ್ ಅವರನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿದ್ದು ನಾಮಪತ್ರ ಸಲ್ಲಿಕೆಯಾಗಿದೆ.
ಬಿಬಿಎಂಪಿಯಲ್ಲಿ ಹಾಗೂ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು, ಈ ಹಿನ್ನೆಲೆಯಲ್ಲಿ ರಾಜ್ಯ ಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎನ್ನುವ ಜೆಡಿಎಸ್ ಪ್ರಸ್ತಾಪಕ್ಕೆ ಎಳ್ಳುನೀರು ನೀರು ಬಿಟ್ಟಿರುವ ಕಾಂಗ್ರೆಸ್ ತನ್ನದೇ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಕಾಂಗ್ರೆಸ್ ನ ಮೂರನೇ ಅಭ್ಯರ್ಥಿ ಜಿ.ಸಿ ಚಂದ್ರಶೇಖರ್ ಮತ್ತು ಜೆಡಿಎಸ್ ನ ಫಾರೂಕ್ ನಡುವೆ ಜಿದ್ದಾಜಿದ್ದೆ ಏರ್ಪಟ್ಟಿದೆ, ಕಾಂಗ್ರೆಸ್ ನಂಬರ್ ಗೇಮ್ ಆಡಲು ಪ್ಲಾನ್ ಮಾಡಿದೆ, 225 ಮಂದಿ ಶಾಸಕರ ಪೈಕಿ ಕಾಂಗ್ರೆಸ್ 122 ಸದಸ್ಯರನ್ನು ಹೊಂದಿದೆ. ರಾಜ್ಯಸಭೆಗೆ ಆಯ್ಕೆ ಯಾಗಲು ಆಭ್ಯರ್ಥಿಯೊಬ್ಬರಿಗೆ 44 ಶಾಸಕರ ಮತಗಳ ಅವಶ್ಯಕತೆಯಿದೆ, ಜಿ.ಸಿ ಚಂದ್ರಶೇಖರ್ ಗೆಲವಿಗೆ ಕಾಂಗ್ರೆಸ್ ಗೆ ಇನ್ನೂ 10 ಶಾಸಕರ ಮತ ಬೇಕಾಗಿದೆ,ೇ ಕೆಲವು ಸ್ವತಂತ್ರ್ಯ ಸದಸ್ಯರನ್ನು ಹೊರತುಪಡಿಸಿದರೇ ಉಳಿದವರೆಲ್ಲಾ ಕಾಂಗ್ರೆಸ್ ಗೆಲುವಿಗೆ ಬೆಂಬಲ ನೀಡುತ್ತಾರೆ, ಜೆಡಿಎಸ್ ಬಂಡಾಯ ಶಾಸಕರು ಕೂಡ ನಮಗೆ ಬೆಂಬಲ ನೀಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದಾರೆ,
ತನ್ನ 122 ಶಾಸಕರ ಜೊತೆಗೆ ಜೆಡಿಎಸ್ ನ 7 ಬಂಡಾಯ ಶಾಸಕರು ತಮ್ಮ ಅಭ್ಯರ್ಥಿಗೆ ಮತ ನೀಡುತ್ತಾರೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತ ಪಡಿಸಿದೆ, ಜೆಡಿಎಸ್ ಸದ್ಯ 37 ಶಾಸಕರಿದ್ದು ಕಾಂಗ್ರೆಸ್ ಲೆಕ್ಕಾಚಾರದಿಂದ ಕಂಗಾಲಾಗಿದೆ.