ರಾಜಕೀಯ

ವಿಧಾನಸಭೆ ಚುನಾವಣೆ: ನಾಲ್ವರ ಕೈಗೆ ಉಸ್ತುವಾರಿ, 125 ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಕಸರತ್ತು

Lingaraj Badiger
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ರಣತಂತ್ರ ರೂಪಿಸುತ್ತಿರುವ ಆಡಳಿತರೂಢ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಒಳಪಡುವ ವಿಧಾನಸಭಾ ಕ್ಷೇತ್ರಗಳ ಮೇಲ್ವಿಚಾರಣೆಗೆ ಉಸ್ತುವಾರಿ ನೇಮಕ ಮಾ‌ಡಿದೆ.
ಇಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ರೆಸಾರ್ಟ್‌ವೊಂದರಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬೆಂಗಳೂರು ವಿಭಾಗಕ್ಕೆ ಡಿ.ಕೆ ಶಿವಕುಮಾರ್, ಮೈಸೂರು ವಿಭಾಗಕ್ಕೆ ದಿನೇಶ್ ಗುಂಡೂರಾವ್, ಬೆಳಗಾವಿ ವಿಭಾಗಕ್ಕೆ ಎಸ್.ಆರ್. ಪಾಟೀಲ್ ಹಾಗೂ ಗುಲ್ಬರ್ಗ ವಿಭಾಗಕ್ಕೆ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ. 
ಈ ನಾಲ್ವರು ಉಸ್ತುವಾರಿಗಳು, ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಗಳು ದುರ್ಬಲ, ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿ ಯಾರು ಎನ್ನುವುದೂ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆಯಂತೆ ಗೆಲ್ಲುವ ಅಭ್ಯರ್ಥಿಗಳು ಹಾಗೂ ವಿವಾದ ರಹಿತ ಅಭ್ಯರ್ಥಿಗಳನ್ನು ಗುರುತಿಸಿ 125 ಅಭ್ಯರ್ಥಿಯ ಪಟ್ಟಿಯನ್ನು ಬಿಡುಗಡೆ ಮಾಡಲು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.  ಅದರಂತೆ ಅಭ್ಯರ್ಥಿಗಳ ಸ್ಥಿತಿ-ಗತಿಗಳನ್ನು ಚರ್ಚಿಸಿ 125 ಮಂದಿ ಪಟ್ಟಿಗೆ ಅಂತಿಮ ರೂಪ ನೀಡಲಾಗಿದೆ.
ಚುನಾವಣಾ ಸಮಿತಿ 125 ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ರೂಪ ನೀಡುವ ಜೊತೆಗೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಸುದೀರ್ಘ ಚರ್ಚೆ ನಡೆಸಿತು. ಸಭೆಯಲ್ಲಿ ನಗರದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಪಕ್ಷದ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಹಿರಿಯ ನಾಯಕರಾದ ಡಿ.ಕೆ. ಶಿವಕುಮಾರ್, ಎಸ್.ಆರ್. ಪಾಟೀಲ್, ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿಗಳೂ ಭಾಗವಹಿಸಿದ್ದರು.
SCROLL FOR NEXT