ರಾಜಕೀಯ

ಕಾಂಗ್ರೆಸ್ ಪಕ್ಷದಲ್ಲಿನ ಹಣದ ಪ್ರಭಾವ ಬಿಚ್ಚಿಟ್ಟ ಮಾಜಿ ಕೇಂದ್ರ ಸಚಿವ ವೀರಪ್ಪಮೊಯ್ಲಿ!

Srinivasamurthy VN
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಹಗ್ಗ ಜಗ್ಗಾಟ ತಾರಕಕ್ಕೇರಿದ್ದು, ಕಾಂಗ್ರೆಸ್ ನಲ್ಲಿ ಹಣದ ಹೊಂದಾಣಿಕೆಯಿಂದ ಅಭ್ಯರ್ಥಿಗಳನ್ನು ನಿರ್ಧರಿಸುವಂತಾಗಿದೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿನ ಹಣದ ಪ್ರಭಾವ ಬಿಚ್ಚಿಟ್ಟ ಮಾಜಿ ಕೇಂದ್ರ ಸಚಿವ ವೀರಪ್ಪಮೊಯ್ಲಿ, ಟ್ವಿಟರ್ ನಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಪ್ರಮುಖವಾಗಿ ಲೋಕೋಪಯೋಗಿ ಸಚಿವ ಹೆಚ್ ಸಿ ಮಹದೇವಪ್ಪ ಅವರ ವಿರುದ್ಧ ನೇರವಾಗಿ ಆರೋಪ ಮಾಡಿರುವ ಮೊಯ್ಲಿ, ಪಿಡಬ್ಲ್ಯೂ ಡಿ ಸಚಿವ, ರಸ್ತೆ ಗುತ್ತಿಗೆದಾರರ ನಡುವೆ ಹೊಂದಾಣಿಕೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಹೊಂದಾಣಿಕೆಯಿಂದ ಅಭ್ಯರ್ಥಿಗಳನ್ನು ನಿರ್ಧರಿಸುವಂತಾಗಿದ್ದು, 
ಕಾಂಗ್ರೆಸ್ ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿನ ಟಿಕೆಟ್ ಹಂಚಿಕೆ ವಿಚಾರ ಸಂಬಂಧ ಮಹದೇವಪ್ಪ ಮತ್ತು ಅವರ ಪುತ್ರ ಸುನಿಲ್ ಬೋಸ್ ಗೆ ಟಿಕೆಟ್ ಖಚಿತ ಎಂಬ ಸುದ್ದಿಗಳು ಪ್ರಸಾರವಾಗಿತ್ತು. ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರೂ ಕೂಡ ತಮ್ಮ ಪುತ್ರ ಹರ್ಷ ಮೊಯ್ಲಿ ಅವರಿಗೆ ಟಿಕೆಟ್ ಕೇಳಿದ್ದರಾದರೂ, ಹರ್ಷ ಮೊಯ್ಲಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈ ಕಮಾಂಡ್ ಹಿಂದೇಟು ಹಾಕಿದೆ ಎನ್ನಲಾಗಿದೆ. ಇನ್ನು ಲೋಕೋಪಯೋಗಿ ಸಚಿವ ಹೆಚ್ ಸಿ ಮಹದೇವಪ್ಪ ಅವರು ತಮ್ಮ ಪುತ್ರ ಸುನಿಲ್ ಬೋಸ್ ಗೆ ಟಿಕೆಟ್ ಕೊಡಿಸುವ ಉದ್ದೇಶದಿಂದ ತಮ್ಮ ಟಿ ನರಸೀಪುರ ಕ್ಷೇತ್ರವನ್ನು ಪುತ್ರ ಸುನಿಲ್ ಬೋಸ್ ಗೆ ನೀಡಿ ತಾವು  ಸಿ.ವಿ.ರಾಮನ್ ನಗರ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
SCROLL FOR NEXT