ರಾಜಕೀಯ

ಅಮೆರಿಕದಲ್ಲಿ ನೆಲೆಸಲು ಮುಂದಾಗಿದೆಯೇ ಸಚಿವ ಎಂಬಿ ಪಾಟೀಲ್ ಕುಟುಂಬ?

Srinivasamurthy VN
ಬೆಂಗಳೂರು: ಕರ್ನಾಟಕದ ನೀರಾವರಿ ಸಚಿವ ಎಂಬಿ ಪಾಟೀಲ್ ಅವರ ಕುಟುಂಬಸ್ಥರು ಅಮೆರಿಕದಲ್ಲಿ ನೆಲೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಖಾಸಗಿ ಸುದ್ದಿವಾಹಿನಿ ಸುವರ್ಣಾ ನ್ಯೂಸ್ ವರದಿ ಮಾಡಿರುವಂತೆ ಲಿಂಗಾಯತ ಧರ್ಮದ ಮುಂಚೂಣಿ ಹೋರಾಟಗಾರ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಕುಟುಂಬಸ್ಥರು ಅಮೆರಿಕ ಗ್ರೀನ್ ಕಾರ್ಡ್ ಗೆ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ. ವರದಿಯಲ್ಲಿರುವಂತೆ ಎಂಬಿ ಪಾಟೀಲ್ ಅವರ ಪತ್ನಿ ಆಶಾ ಪಾಟೀಲ್ ಅವರು ಅಮೆರಿಕ ಗ್ರೀನ್ ಕಾರ್ಡ್​ ಪಡೆಯಲು ಯತ್ನಿಸಿದ್ದಾರೆ ಎನ್ನಲಾಗಿದೆ. 
ಪಾಟೀಲ್ ಕುಟುಂಬ ವಿದೇಶದಲ್ಲಿ ಬಂಡವಾಳ ಹೂಡಲು ಆಸಕ್ತವಾಗಿದೆ ಎಂದು ಹೇಳಲಾಗಿದ್ದು, ಅಮೆರಿಕದಲ್ಲಿ ಕನಿಷ್ಠ 10 ಜನರಿಗೆ ಪೂರ್ಣ ಪ್ರಮಾಣದ ಉದ್ಯೋಗ ಕೊಟ್ಟರೆ, ಗ್ರೀನ್ ಕಾರ್ಡ್ ಸಿಗಲಿದೆ. ಅಲ್ಲದೇ ಅಲ್ಲಿಯೇ ಶಾಶ್ವತವಾಗಿ ನೆಲೆಸಲು ಅವಕಾಶ ಸಿಗಲಿದೆ. ಅದಕ್ಕೆ ಅಲ್ಲಿ 3.35 ಕೋಟಿ ರೂಪಾಯಿ ಪ್ರಾರಂಭಿಕ ಹಣ ಹೂಡಲೂ ಪಾಟೀಲ್ ಕುಟುಂಬ ಸಿದ್ಧವಿದೆ ಎನ್ನಲಾಗಿದೆ. 
ಗ್ರೀನ್ ಕಾರ್ಡ್ ಗಾಗಿ ಪಾಟೀಲ್ ಕುಟುಂಬ ಈಗಾಗಲೇ ಗ್ರೀನ್ ಕಾರ್ಡ್ ಕೊಡಿಸುವ ವಿದೇಶಿ ಕಂಪನಿಗೆ 33 ಲಕ್ಷ 50 ಸಾವಿರ ರೂಪಾಯಿ ಕೊಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.  ಪರವಾನಗಿ ಕಲ್ಪಿಸುವ ಮತ್ತೊಂದು ಕಂಪನಿಗೆ 10 ಲಕ್ಷ ರೂಪಾಯಿ​​​​​ ಸಂದಾಯ ಮಾಡಿದ್ದಾರೆ. ಈ ಸಂಬಂಧವಾಗಿ LCR ಪಾರ್ಟ್ ನರ್ಸ್ (LLC)ಹಾಗೂ ಬರ್ನ್ ಸೆನ್ & ಲೊವಿ (LLP)ಎಂಬ ಎರಡು ಕಂಪನಿಗಳಿಗೆ ಪರವಾನಗಿ ಕೊಡಿಸಲು ಹಣ ಸಂದಾಯ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನು ಈ ವರದಿಗೆ ಸಂಬಂಧಿಸಿದಂತೆ  ಪ್ರತಿಕ್ರಿಯೆ ನೀಡಿರುವ ಸಚಿವ ಎಂಬಿ ಪಾಟೀಲ್, 'ನನ್ನ ಮಗ ಅಮೆರಿಕದಲ್ಲಿ ಓದಿದ್ದು, ಅಲ್ಲಿಯೇ ನೆಲಸಲು ತಯಾರಿ ನಡೆಸುತ್ತಿರುವುದು ಹೌದು. ಆದರೆ, ನನ್ನ ಪತ್ನಿ ಅಂಥಹ ಯಾವುದೇ ಯೋಚನೆ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಆರೋಪಕ್ಕೆ ಸಂಬಂಧಿಸಿದಂತೆ ಮಾರ್ಚ್ 25ರಂದು ಖುದ್ದು ಪತ್ನಿ ಹಾಗೂ ಮಗ ಬಂದು ಸುವರ್ಣ ನ್ಯೂಸ್ ಮೂಲಕವೇ ಸ್ಪಷ್ಟನೆ ನೀಡಲಿದ್ದಾರೆಂದು ಪಾಟೀಲ್ ಅವರು ಹೇಳಿದ್ದಾರೆ.
SCROLL FOR NEXT