ಹಾಸನ: ನಾನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಶುಕ್ರವಾರ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ದೇವೇಗೌಡ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲು ಬಯಸುವುದಿಲ್ಲ. ವೀಲ್ ಚೇರ್ ನಲ್ಲಿ ಸಂಸತ್ ಗೆ ಹೋಗಲು ನನಗಿಷ್ಟವಿಲ್ಲ. ಹೀಗಾಗಿ ನನ್ನ ಬದಲಿಗೆ ಪಕ್ಷದ ಇತರೆ ಹಿರಿಯ ನಾಯಕರು ಸ್ಪರ್ಧಿಸುವಂತೆ ಕೇಳಿದ್ದೇನೆ. ಆದರೆ ಅವರು ಒಪ್ಪಿಲ್ಲ. ಪಕ್ಷದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಪ್ರಜ್ವಲ್ ನನ್ನು ನನ್ನ ಮಗ ಎಂದು ತಿಳಿದು ಗೆಲ್ಲಿಸಲಿ
ಇದೇ ವೇಳೆ ಪ್ರಜ್ವಲ್ ರೇವಣ್ಣ ಸ್ಪರ್ಧೆ ಕುರಿತು ಮಾತನಾಡಿ ದೇವೇಗೌಡ ಅವರು, ಜಿಲ್ಲೆಯ ಪಕ್ಷದ ನಾಯಕರ ಅಭಿಪ್ರಾಯ ಕೇಳುವೆ. ಹಿರಿಯ ನಾಯಕರಿಗೆ ಮೊದಲ ಆದ್ಯತೆ. ಅವರು ಸ್ಪರ್ಧೆ ಮಾಡದೇ ಹೋದರೆ ಮೊಮ್ಮಗ ಪ್ರಜ್ವಲ್ ನನ್ನು ಲೋಕಸಭೆಗೆ ಕಳಿಸಬೇಕು ಎಂಬ ಆಸೆ ಇದೆ. ಮೊಮ್ಮಗ ವಿದ್ಯಾವಂತ, ಕೊಂಚ ದುಡುಕು ಬುದ್ಧಿ ಅಷ್ಟೆ. ನನ್ನ ಬಿಟ್ಟು ಬೇರೆಯವರು ಸ್ಪರ್ಧೆ ಮಾಡಿದರೆ ಸ್ವಾಗತ. ಇಲ್ಲವಾದರೆ ಪ್ರಜ್ವಲ್ ನನ್ನು ಮಗನೆಂದು ತಿಳಿದು ಗೆಲ್ಲಿಸಲಿ ಎಂದು ಹೇಳಿದರು.
ದಲಿತರೊಂದಿಗೆ ಭೋಜನ, ಅಮಿತ್ ಶಾಗೆ ಈಗಲಾದರೂ ಬುದ್ದಿ ಬಂತಲ್ಲ
ಅಂತೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕುರಿತು ಮಾತನಾಡಿದ ದೇವೇಗೌಡ ಅವರು, ಅಮಿತ್ ಶಾ ಅವರಿಗೆ ಈಗಲಾದರೂ ಬುದ್ಧಿ ಬಂದಿದೆ, ದಲಿತರೊಂದಿಗೆ ಭೋಜನ ಮಾಡಿದ್ದಾರೆ. ಅಮಿತ್ ಶಾ ಯಾವ ಕಾರಣಕ್ಕೆ ಮೈಸೂರಿಗೆ ಹೋಗಿದ್ದಾರೆ ತಿಳಿದಿಲ್ಲ ಎಂದು ಹೇಳಿದರು. ದಲಿತರ ಜೊತೆ ಶಾ ಭೋಜನದ ಬಗ್ಗೆ ಪ್ರಸ್ತಾಪಿಸಿ ಈಗಲಾದರೂ ಅವರಿಗೆ ಈ ಬುದ್ಧಿ ಬಂದಿದ್ದಕ್ಕೆ ಸಂತೋಷ ಎಂದು ಹೇಳಿದರು. ಇದು ನನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈ ರೀತಿಯ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬಾರದು. ಕಳೆದ ಬಾರಿಯೂ ಸಿದ್ದರಾಮಯ್ಯ ಹೀಗೇ ಹೇಳಿದ್ದರು. ಅವರ ಬಳಿ ಅಧಿಕಾರ ಇದೆ. ಅದಕ್ಕೆ ಯಾರು ಏನೇ ಮಾಡಿದರು ಗೆದ್ದೇ ಗೆಲ್ಲುವೆ ಎನ್ನುತ್ತಿದ್ದಾರೆ. ನಾನು ನಮ್ಮ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪರ ಹೋರಾಟ ಮಾಡುವೆ ಎಂದು ದೇವೇಗೌಡರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics