ರಾಜಕೀಯ

ಹಾಲಪ್ಪ ಕಾಂಗ್ರೆಸ್ ಸೇರ್ಪಡೆ ಖಚಿತ, ಗ್ರೀನ್ ಸಿಗ್ನಲ್ ನೀಡಿದ ಸಿಎಂ ಸಿದ್ದರಾಮಯ್ಯ

Srinivasamurthy VN
ಮೈಸೂರು: ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತವಾಗಿದ್ದು, ಹಾಲಪ್ಪ ಕಾಂಗ್ರೆಸ್ ಸೇರ್ಪಡೆಗೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಹಾಲಪ್ಪ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ನಮ್ಮ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ನಾನು ಆ ಕುರಿತು ಹೈಕಮಾಂಡ್‌ ಜೊತೆ ಮಾತನಾಡುತ್ತೇನೆ. ಹಾಲಪ್ಪ ಅವರ ಮೇಲಿದ್ದ ಕ್ರಿಮಿನಲ್‌ ಕೇಸ್‌ ಖುಲಾಸೆ ಆಗಿದೆ. ಅವರೀಗ ಆರೋಪ ಮುಕ್ತರಾಗಿದ್ದಾರೆ. ಅವರು ಹಿಂದುಳಿದ ವರ್ಗದ ನಾಯಕ. ಸಿದ್ಧಾಂತ ಹೊಂದಾಣಿಕೆ ಆಗುತ್ತದೆ. ಪಕ್ಷ ಸೇರ್ಪಡೆಯಾಗಲು ಅಡ್ಡಿ ಇಲ್ಲ, ಒಂದೇ ಸಿದ್ಧಾಂತ ನಂಬಿ ಬರುವವರಿಗೆ ಪಕ್ಷಕ್ಕೆ ಸ್ವಾಗತವಿದೆ' ಎಂದು ಹೇಳಿದರು.
ಸಿಎಂಗೆ 750 ಕೆಜಿ ಸೇಬಿನ ಹಾರ !
ಇದೇ ವೇಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಹೂಟಗಳ್ಳಿಯಲ್ಲಿ ಅಭಿಮಾನಿಗಳ ಸಂಘದ ಅಧ್ಯಕ್ಷ ದೇಶಿಗೌಡ ಅವರು 750 ಕೆಜಿ ತೂಕದ ಬೃಹತ್‌ ಸೇಬುಗಳ ಹಾರ ಹಾಕಿ ಸ್ವಾಗತಿಸಿದರು. ವಿಪರ್ಯಾಸವೆಂದರೆ ಸಿಎಂಗೆ ಹಾರ ಹಾಕಿದ ಬೆನ್ನಲ್ಲೇ ಹಾರದಲ್ಲಿರುವ ಸೇಬುಗಳಿಗಾಗಿ ಕಾರ್ಯಕರ್ತರು ಮುಗಿಬಿದ್ದ ಘಟನೆ ನಡೆಯಿತು. ಹಾರ ಹಾಕಿದ ಬಳಿಕ ಅಲ್ಲಿದ್ದ ಕೈ ಕಾರ್ಯಕರ್ತರು ಮುಗಿ ಬಿದ್ದು ಸೇಬುಗಳನ್ನು ಕಿತ್ತುಕೊಂಡರು. 
SCROLL FOR NEXT