ಉಡುಪಿ ರ್ಯಾಲಿಯಲ್ಲಿ ದೇವೇಗೌಡರ ಗುಣಗಾನ; ಚುನಾವಣೋತ್ತರ ಮೈತ್ರಿ ಮುನ್ಸೂಚನೆ ನೀಡಿದರೇ ಮೋದಿ?
ಉಡುಪಿ; ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದ ಕಾವು ದಿನದಿಂದ ಹೆಚ್ಚಾಗುತ್ತಿದ್ದು, ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಿ ನಡೆಸಿದ್ದ ರ್ಯಾಲಿಗಳು ಸಾಕಷ್ಟು ಕುತೂಹಲಗಳನ್ನು ಕೆರಳಿಸಿವೆ.
ಮೈಸೂರಿನ ಸಂತೇಮರಹಳ್ಳಿಗೆ ಭೇಟಿ ನೀಡಿದ್ದ ಪ್ರಧಾನುಮಂತ್ರಿ ನರೇಂದ್ರ ಮೋದಿಯವರು, ಪ್ರಚಾರ ಕಾರ್ಯವನ್ನು ಆರಂಭಿಸಿದ್ದರು. ಮೈಸೂರಿನಲ್ಲಿ ನಡೆಸಲಾದ ರ್ಯಾಲಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ವಾಕ್ಸಮರ ನಡೆಸಿದ್ದರು.
ಬಳಿಕ ಉಡುಪಿಗೆ ಭೇಟಿ ನೀಡಿದ ಅವರು, ರ್ಯಾಲಿಯಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರನ್ನು ಕೊಂಡಾಡಿದರು. ಈ ಹಿಂದಷ್ಟೇ ಸಿದ್ದರಾಮಯ್ಯ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ವಿಮಾನದಲ್ಲಿ ತೆರಳುತ್ತಾ ಮಾತುಕತೆ ನಡೆಸಿದ್ದು, ಒಳಒಪ್ಪಂದ ಮಾಡಿಕೊಂಡಿದ್ದಾರೆಂದು ಹೇಳಿದ್ದರು.
ನಿನ್ನೆ ಉಡುಪಿ ರ್ಯಾಲಿಯಲ್ಲಿ ಪ್ರಧಾನಿ ಮೋದಿಯವರ ಮಾತುಗಳು ಇದಕ್ಕೆ ಇಂಬು ನೀಡುವಂತಿತ್ತು. ಎಂಜಿಎಂ ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದ ಮೋದಿಯವರು, ರಾಹುಲ್ ಗಾಂಧಿ ಜೀವನ ಈಗಷ್ಟೇ ಆರಂಭವಾಗಿದೆ. ಆದರೆ, ದೇವೇಗೌಡರು ಜೀವನವನ್ನು ಎಷ್ಟೊಂದು ಸವೆಸಿದ್ದಾರೆ, ದೆಹಲಿಯಲ್ಲಿನ ತಮ್ಮ ಮನೆಗೆ ಬಂದಾಗಲೆಲ್ಲಾ ಬಾಗಿಲವರೆಗೂ ಬಂದು ಸ್ವಾಗತ ಕೋರುತ್ತೇನೆ, ಮತ್ತೆ ಹೋಗುವಾಗಲು ಕಾರಿನ ಬಳಿ ಹೋಗಿ ಬೀಳ್ಕೂಡುತ್ತೇನೆ.
ಕೆಲ ತಿಂಗಳ ಹಿಂದಷ್ಟೇ ರಾಹುಲ್ ಗಾಂಧಿಯವರು ದೇವೇಗೌಡ ಅವರ ಬಗ್ಗೆ ಸಾರ್ವಜನಿಕವಾಗಿ ತೆಗಳಿದ್ದರು. ಅವರ ಮಾತುಗಳು ನಿಜಕ್ಕೂ ನಾಚಿಕೆಗೇಡು ಎನಿಸಿತು. ಹಿರಿಯರಿಗೆ ಗೌರವ ಕೊಡುವ ರಾಹುಲ್ ಅವರ ಸಂಸ್ಕೃತಿ ಇದೆಯೇ? ಹಿರಿಯರಿಗೆ ಈ ರೀತಿ ಗೌರವ ನೀಡುತ್ತಾರೆಯೇ? ಎಂದು ಪ್ರಶ್ನಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics