ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇದ್ದಕ್ಕಿದ್ದಂತೆ ಪ್ರೀತಿ ಹೇಗೆ ಬಂತು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪ್ರಶ್ನೆ ಮಾಡಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ದೇವೇಗೌಡ ಅವರಿಗೆ ವೃದ್ಧಾಶ್ರಮಕ್ಕೆ ಹೋಗುವಂತೆ ತಿಳಿಸಿದ್ದಿರಿ. ಇದೀಗ ಮೋದಿಯವರಿಗೆ ಇದ್ದಕ್ಕಿದ್ದಂತೆ ದೇವೇಗೌಡ ಅವರ ಮೇಲೆ ಪ್ರೀತಿ ಬಂದಿದೆ. ಇದೆಲ್ಲವನ್ನೂ ನೋಡಿದರೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಳಒಪ್ಪಂದ ಮಾಡಿಕೊಂಡಿರುವುದು ಸ್ಪಷ್ಟವಾಗುವುದಿಲ್ಲವೇ?... ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಇದಲ್ಲದೆ, ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ಮೋದಿಯಿರುವ ಫೋಟೋವೊಂದನ್ನು ಸಿದ್ದರಾಮಯ್ಯ ಅವರು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮೋದಿಯವರ ಮುಂದೆ ಯಡಿಯೂರಪ್ಪ ಅವರ ಬಾಗಿ ಕೈಮುಗಿಯುತ್ತಿರುವುದು ಕಂಡು ಬಂದಿದೆ.
ಮೋದಿ ಜೀ...ನೀವು ದೇವೇಗೌಡ ಅವರಿಗೆ ವಿನಯಶೀಲರಾಗಿರುವ ಬಗ್ಗೆ ಉಚಿತ ಸಲಹೆಗಳನ್ನು ನೀಡುತ್ತಿದ್ದೀರಿ. ನಿಮ್ಮ ಗುರು ಎಲ್.ಕೆ. ಅಡ್ವಾಣಿಯವರನ್ನು ಎಷ್ಟರ ಮಟ್ಟಿಗೆ ಗೌರವದಿಂದ ನೋಡುತ್ತಿದ್ದೀರಿ ಎಂಬುದು ನಮಗೆಲ್ಲರಿಗೂ ಗೊತ್ತು. 2014ರಲ್ಲಿ ದೇವೇಗೌಡ ಬಗ್ಗೆ ಎಷ್ಟು ವಿನಯಶೀಲರಾಗಿದ್ದಿರಿ ಎಂಬುದೂ ಗೊತ್ತು. 75 ವರ್ಷದ ಈ ವ್ಯಕ್ತಿ ತಲೆ ಬಾಗಿ ನಮಸ್ಕರಿಸುತ್ತಿರುವಾಗ ಇದಕ್ಕೆಷ್ಟು ಸೌಜನ್ಯತೆಯನ್ನು ಪ್ರದರ್ಶಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಸಾಕಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕೈಜೋಡಿಸಿ, ಒಳಒಪ್ಪಂದ ಮಾಡಿಕೊಂಡಿದೆ. ಆದರೂ, ಅವರು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ ರಾಜ್ಯದ ಜನತೆ ನಮ್ಮೊಂದಿಗಿದ್ದಾರೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics