ಯೋಗೇಶ್ವರ್, ಕುಮಾರಸ್ವಾಮಿ ಮತ್ತು ಎಚ್ .ಎಂ ರೇವಣ್ಣ
ಚನ್ನಪಟ್ಟಣ: ಬೊಂಬೆಯ ನಾಡು ಎಂದೇ ಖ್ಯಾತಿ ಹೊಂದಿರು ಚನ್ನಪಟ್ಟಣ ಅಖಾಡ ಬಹಳಷ್ಟು ರೋಚಕವಾಗಿದೆ, ರಾಜ್ಯ ರಾಜಧಾನಿ ಬೆಂಗಳೂರಿನಿಂದ 60 ಕಿಮೀ ದೂರದಲ್ಲಿರುವ ಚನ್ನಪಟ್ಟಣ ವಿಧಾನಸಕ್ಷೆ ಕ್ಷೇತ್ರ ಜಿದ್ದಾಜದ್ದಿನ ರಣರಂಗವಾಗಿ ಮಾರ್ಪಟ್ಟಿದೆ, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿಪಿ ಯೋಗೇಶ್ವರ್ ವಿರುದ್ಧ ಖುದ್ದು ಮಾಜಿ ಸಿಎಂ ಕುಮಾರ ಸ್ವಾಮಿ ಅಕಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ಸಾರಿಗೆ ಸಚಿವ ಎಚ್.ಎಂ ರೇವಣ್ಣ ಅವರನ್ನು ಕಣಕ್ಕಿಳಿಸಿದೆ.
ಪ್ರತಿ ಚುನಾವಣೆ ವೇಳೆ ಪಕ್ಷಾಂತರ ಮಾಡು ಯೋಗೇಶ್ವರ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಯೋಗೇಶ್ವರ್ ಅನಿತಾ ಕುಮಾರ ಸ್ವಾಮಿ ಅವರನ್ನು ಸೋಲಿಸಿದ್ದರು. ಚುನಾವಣಾ ದಿನಾಂಕ ಘೋಷಣೆಯಾಗುವುದಕ್ಕೂ ಕೆಲ ತಿಂಗಳುಗಳ ಮುನ್ನ ಯೋಗೇಶ್ವರ್ ಬಿಜೆಪಿ ಸೇರಿದ್ದರು. ಸಮಾಜವಾದಿ ಪಕ್ಷ, ಕಾಂಗ್ರೆಸ್ ನಂತರ ಬಿಜೆಪಿಗೆ ಎರಡನೇ ಬಾರಿ ಯೋಗೇಶ್ವರ್ ಜಿಗಿದಿದ್ದಾರೆ.
2002 ರಲ್ಲಿ ಯೋಗೇಶ್ವರ್ ಅಭಿನಯದ ಸೈನಿಕ ಸಿನಿಮಾ ತೆರೆ ಕಂಡಿತ್ತು, ವ್ಯಕ್ತಿಯಾಧಾರಿತ ರಾಜಕೀಯಕ್ಕೆ ಮಹತ್ವ ಕೊಡುವ ಜನರು ಯಾವುದೇ ಚಿಹ್ನೆ ಅಥವಾ ರಾಜಕೀಯ ಪಕ್ಷಕ್ಕೆ ಬೆಲೆ ಕೊಡುವುದಿಲ್ಲ ಎಂಬುದಕ್ಕೆ ಚನ್ನ ಪಟ್ಟಣ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಿದೆ.
ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ ಕುಮಾರ ಸ್ವಾಮಿ ಸ್ವತಃ ಕಣಕ್ಕಿಳಿದಿರುವುದರಿಂದ ಈ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದ್ದು ಇಬ್ಬರು ಪ್ರಬಲ ಒಕ್ಕಲಿಗರ ನಾಯಕರ ನಡುವಿನ ಕಾದಾಟವಾಗಿದೆ. ಕುರುಬ ಸಮುದಾಯಕ್ಕೆ ಸೇರಿದ ಹಾಗೂ ಸಿಎಂ ಆಪ್ತರಾಗಿರುವ ಎಚ್. ಎಂ ರೇವಣ್ಣ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದಾರೆ.
ಕುಮಾರ ಸ್ವಾಮಿ ಎಂಟ್ರಿ ಯೋಗೇಶ್ವರ್ ಗೆ ಗಂಭೀರ ಸವಾಲಾಗಿದೆ, ಅತಿ ದೊಡ್ಡ ಸಂಖ್ಯೆಯ ಅಭಮಾನಿಗಳು ಕುಮಾರ ಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ನೋಡುವ ಆಸೆ ಹೊಂದಿದ್ದಾರೆ. ಕ್ಷೇತ್ರದಲ್ಲಿ ಯೋಗೇಶ್ವರ ಉತ್ತಮ ಕೆಲಸ ಮಾಡಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ, ಆದರೆ ಹೆಚ್ಚಿನ ಸಂಖ್ಯೆಯ ಒಕ್ಕಲಿಗರು ಕುಮಾರಸ್ವಾಮಿ ಪರವಿದ್ದು ಎಚ್ ಡಿ ಕೆ ಮತ್ತೊಮ್ಮೆ ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ. ಈ ಭಾಗದಿಂದ ಶಾಸಕರಾಗಿ ಆಯ್ಕೆಯಾಗಲಿ ಅಥವಾ ಮುಖ್ಯಮಂತ್ರಿಯಾಗಿ ಆಯ್ಕೆ ಆಗಲಿ, ನಮಗೆ ಬೇಕಿರುವುದು ಅಭಿವೃದ್ಧಿ ಎಂದು ಕೆರೆಮೇಗಲ ದೊಡ್ಡಿ ರೈತ ದೇವರಾಜ್ ಹೇಳಿದ್ದಾರೆ.
ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರಗಳಿಂದ ಕುಮಾರ ಸ್ವಾಮಿ ಸ್ಪರ್ಧಿಸಿದ್ದಾರೆ.,ಚನ್ನಪಟ್ಟಣದಲ್ಲೂ ಗೆಲುವು ಸಾಧಿಸಬೇಕೆಂಬ ಪಣ ತೊಟ್ಟಿರುವ ಎಚ್ ಡಿಕೆ ಮತದಾರರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಉಪ ಚುನಾವಣೆಯಲ್ಲಿ ಪತ್ನಿ ಅನಿತಾ ಅವರನ್ನು ರಾಮನಗರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ.
ನೀರಾವರಿ ಯೋಜನೆ ಯೋಗೇಶ್ವರ್ ಗೆ ಶ್ರೀರಕ್ಷೆ?
ಚನ್ನಪಟ್ಟಣ ಮತ್ತು ರಾಮನಗರಗಳಲ್ಲಿ ಬತ್ತಿ ಹೋಗಿದ್ದ ಹಲವು ಕೆರೆಗಳಿಗೆ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ಶಿಂಷಾ ನದಿಯಿಂದ ನೀರು ತುಂಬಿಸಿದ್ದಾರೆ. ಸುಡು ಬೇಸಿಗೆಯಿದ್ದರೂ ಕ್ಷೇತ್ರದ ಬಹುತೇಕ ಕೆರೆಗಳಲ್ಲಿ ನೀರು ತುಂಬಿದೆ, ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಿದ್ದಕ್ಕೆ ಯೋಗೇಶ್ವರ್ ಅವರಿಗೆ ನಾವು ಋಣಿಯಾಗಿದ್ದೇವೆ, ಈ ಮೊದಲು 1,200 ರಿಂದ 1,500 ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿರಲಿಲ್ಲ, ಆದರೆ ಈಗ ಕೇವಲ 400-500 ಅಡಿ ಕೊರದರೇ ನೀರು ಸಿಗುತ್ತಿದೆ, ಎಂದು ಮುನಿಯಪ್ಪನದೊಡ್ಡಿ ಬೊಂಬೆ ತಯಾರಕರಾದ ಮಂಜುನಾಥ್ ತಿಳಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಈ ಕ್ಷೇತ್ರದ ನೀರಾವರಿ ಯೋಜನೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿದೆ.ಆದರೆ ಅದರ ಎಲ್ಲಾ ಕ್ರೆಡಿಟ್ ಅನ್ನು ಯೋಗೇಶ್ವರ್ ಪಡೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯಸ್ಥ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕುಮಾರ ಸ್ವಾಮಿ ಮತ್ತು ರೇವಣ್ಣ ಹೊರಗಿನವರು, ಆದರೆ ಯೋಗೇಶ್ವರ್ ಸ್ಥಳೀಯರು, ಯಾವ ಸಮಯದಲ್ಲಾದರೂ ಕ್ಷೇತ್ರದ ಜನತೆಗೆ ಸಿಗುತ್ತಾರೆ, ಅವರ ಮನೆ ಚನ್ನಪಟ್ಟಣದಲ್ಲಿರುವುದರಿಂದ ಕಾರ್ಯಕರ್ತರಿಗೆ ಸುಲಭವಾಗಿ ಅವರ ಸಹಾಯ ಸಮಯಕ್ಕೆ ಸಿಗುತ್ತದೆ ಆದರೆ ಕುಮಾರ್ ಸ್ವಾಮಿ ಅವರನ್ನು ನೋಡಲು ನಾವು ಬೆಂಗಳೂರಿಗೆ ಹೋಗಬೇಕಾಗುತ್ತದೆ. ಇನ್ನೂ ರೇವಣ್ಣ ಮಾಗಡಿಯವರಾಗಿದ್ದಾರೆ, ಅವರನ್ನು ಭೇಟಿ ಮಾಡುವುದು ಕೂಡ ತುಸು ಕಷ್ಠ ಸಾದ್ಯ ಹೀಗಾಗಿ ಯೋಗೇಶ್ವರ್ ಅವರಿಗೆ ಇದು ಲಾಭವಾಗಿದೆ ಎಂದು ಪುಟ್ಟಸ್ವಾಮಿ ಎಂಬುವರು ಹೇಳಿದ್ದಾರೆ.
ಕ್ಷೇತ್ರದಲ್ಲಿ ಯೋಗೇಶ್ವರ್ ಈಗಾಗಲೇ ಪ್ರಚಾರಕಾರ್ಯ ಆರಂಭಿಸಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಬಲ ನಾಯಕರುಗಳಾದ ಯೋಗೇಶ್ವರ್-ಕುಮಾರ ಸ್ವಾಮಿ ನಡುವೆ ಹೋರಾಟ ಆರಂಭವಾಗಿದೆ, ಕಾಂಗ್ರೆಸ್ ಅಭ್ಯರ್ಥಿ ರೇವಣ್ಣ ಮುಸ್ಲಿಂ ಸಮುದಾಯದ ಮತ ಪಡೆಯಲು ಪ್ರಯತ್ನಿಸುತ್ತಿದ್ದಾರೆ, ಜೊತೆಗೆ ಹಿಂದುಳಿದ ವರ್ಗಗಳ ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆ, 2013ರ ಚುನಾವಣೆಯಲ್ಲಿ ಗೆಲುವು ಯೋಗೇಶ್ವರ್ ಪರವಾಗಿತ್ತು,
ಈ ಬಾರಿ ವಿಜಯಲಕ್ಷ್ಮಿ ಯಾರ ಕೊರಳಿಗೆ ಮಾಲೆ ಹಾಕುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.