ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಮೈಸೂರು: ಭಾರತದಿಂದ ಪಾಕಿಸ್ತಾನವನ್ನು ವಿಭಜಿಸಿ ಪ್ರತ್ಯೇಕ ರಾಷ್ಟ್ರಕ್ಕೆ ಕಾರಣವಾದ ಮೊಹಮ್ಮದ್ ಅಲಿ ಜಿಲ್ಲಾ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ನಿಲುವ ಸ್ಪಷ್ಟಪಡಿಸಿದ ಬಳಿಕವೂ, ಕಾಂಗ್ರೆಸ್ ಮಾಜಿ ಮುಖಂಡ ಮಣಿಶಂಕರ್ ಅಯ್ಯರ್ ಅವರು ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳುವ ಮೂಲಕ ವಿವಾದಕ್ಕೆ ಕಿಡಿ ಹೊತ್ತಿಸಿದ್ದಾರೆ.
ಮಣಿಶಂಕರ್ ಅಯ್ಯರ್ ಅವರ ವರ್ತನೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಬಂಡವಾಳ ಮಾಡಿಕೊಂಡಿದ್ದು, ಇದನ್ನು ಕರ್ನಾಟಕ ವಿಧಾನಸಬೆ ಚುನಾವಣೆಗೆ ಹೋಲಿಕೆ ಮಾಡಿ ಅಯ್ಯರ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಶಾ ಅವರು, ಕಾಂಗ್ರೆಸ್ ಮತ್ತು ಪಾಕಿಸ್ತಾನಕ್ಕೆ ಉತ್ತಮವಾದ ದೂರ ಸಂಪರ್ಕ ಸಂಬಂಧವಿದೆ. ಶುಕ್ರವಾರವಷ್ಟೇ ಪಾಕಿಸ್ತಾನ ಸರ್ಕಾರ ಟಿಪ್ಪು ಸುಲ್ತಾನ್ ಅವರ ಪುಣ್ಯ ತಿಥಿ ಆಚರಿಸುವ ಮೂಲಕ ಅವರನ್ನು ಸ್ಮರಣೆ ಮಾಡಿತ್ತು,
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಟಿಪ್ಪು ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಿದೆ. ಈ ನಡುವೆ ಮಣಿಶಂಕರ್ ಅಯ್ಯರ್ ಅವರು ಜಿನ್ನಾ, ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುಜರಾತ್ ಅಥವಾ ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಾಕಿಸ್ತಾನದ ಜೊತೆಗೆ ಏಕೆ ಸಕ್ರಿಯವಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್'ನ್ನು ಛೇಡಿಸಿದ್ದಾರೆ.
ಇದರ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಶಾ, ದೇಶದ ಆಂತರಿಕ ರಾಜಕೀಯದಲ್ಲಿ ಕಾಂಗ್ರೆಸ್ ವಿದೇಶಗಳ ಜೊತೆಗೆ ಶಾಮೀಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಕಳೆದ ಗುಜರಾತ್ ರಾಜ್ಯ ವಿಧಾನಸಬಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಪಾಕಿಸ್ತಾನದ ಉನ್ನತ ಅಧಿಕಾರಿಗಳಿಗೆ ಕಾಂಗ್ರೆಸ್ (ಅಯ್ಯರ್) ಔತಣ ಸಭೆ ನಡೆಸಿದ್ದನ್ನು ನೋಡಿದ್ದೇವೆ. ಇದೀಗ ಟಿಪ್ಪು ಸುಲ್ತಾನ್ ಮತ್ತು ಜಿನ್ನಾ ಬಗ್ಗೆ ಪ್ರೀತಿ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಅಲ್ಲದೆ, ನಮ್ಮ ಆಂತರಿಕ ವಿಚಾರದಲ್ಲಿ ವಿದೇಶದ ರಾಷ್ಟ್ರಗಳ ಜೊತೆಗೆ ಕೈಜೋಡಿಸಬಾರದು ಎಂಬುದಾಗಿ ಕಾಂಗ್ರೆಸ್'ಗೆ ಕಳಕಳಿಯಿಂದ ಪ್ರಾರ್ಥಿಸುತ್ತೇನೆ. ನಾಗರೀಕ ಮತ್ತು ಧನಾತ್ಮಕ ಸಂವಾದದಲ್ಲಿ ನಂಬಿಕೆಯಿಡೋಣ ಎಂದು ಟಾಂಗ್ ನೀಡಿದ್ದಾರೆ.