ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ವಿಚಾರ ರಾಜಕೀಯ ಹಾಗೂ ರಾಷ್ಟ್ರೀಯ ವಿಚಾರ. ಬುಲೆಟ್ ರೈಲುಗಳ ಬಗ್ಗೆ ಚರ್ಚೆ ನಡೆಸಲು ಇಚ್ಛಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂಲಭೂತ ವಿಚಾರಗಳ ಬಗ್ಗೆ ಚರ್ಚಿಸಲು ಇಚ್ಛಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಹಲವು ತಿಂಗಳಿನಿಂದಲೂ ನಾನು ಓಡಾಡುತ್ತಿದ್ದೇನೆ. ಮೂಲಭೂತ ವಿಚಾರಗಳ ಸಂಬಂಧ ನಾವೆಲ್ಲರೂ ಒಗ್ಗಟ್ಟಿನಿಂದ ನಿಂತು ಪ್ರಚಾರ ನಡೆಸುತ್ತಿದ್ದೇವೆ. ಜನರ ದನಿಯಾಗಿ ನಾನು ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ. ವೈಯಕ್ತಿಕವಾಗಿ ಹೇಳಿಕೆ ನೀಡುವುದನ್ನು ವಿರೋಧ ಪಕ್ಷಗಳೂ ಕೂಡ ನಿಲ್ಲಿಸಿದೆ. ರಾಜ್ಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ ಎಂದು ನಾವು ಹೇಳುತ್ತಲೇ ಇದ್ದೇವೆ. ರೋಹಿತ್ ವೆಮುಲಾರನ್ನು ಹತ್ಯೆ ಮಾಡಲಾಯಿತು. ಈ ಪ್ರಕರಣದ ಬಗ್ಗೆ ಮೋದಿ ಒಂದು ಮಾತನ್ನು ಹೇಳಲಿಲ್ಲ. ದೇಶದಲ್ಲಿ ದಲಿತರ ಹತ್ಯೆ ಹಾಗೂ ಅವಮಾನ ಮಾಡುತ್ತಿದ್ದರೂ ಮೋದಿಯವರು ಏನ್ನೂ ಮಾತನಾಡುವುದಿಲ್ಲ. ದಲಿತರ ಹಕ್ಕುಗಳು ಹಾಗೂ ಅವರ ಮೇಲಿನ ದೌರ್ಜನ್ಯ ಕುರಿತು ಕಾಂಗ್ರೆಸ್ ಹೋರಾಟವನ್ನು ಮುಂದುವರೆಸಲಿದೆ. ಮಹಿಳೆಯರ ಮೇಲಿನ ದೌರ್ಜನ್ಯ ರಾಜಕೀಯ ಹಾಗೂ ರಾಷ್ಟ್ರೀಯ ವಿಚಾರ. ಬುಲೆಟ್ ರೈಲುಗಳ ಬಗ್ಗೆ ಚರ್ಚೆ ನಡೆಸಲು ಇಚ್ಛಿಸುವ ಪ್ರಧಾನಿ ಮೋದಿಯವರು ದೇಶದ ಮೂಲಭೂತ ವಿಚಾರಗಳ ಬಗ್ಗೆ ಮಾತ್ರ ಚರ್ಚಿಸಲು ಇಚ್ಛಿಸುವುದಿಲ್ಲ.
ಕಳೆದ 15 ವರ್ಷಗಳಿಂದಲೂ ನಾನು ದೇವಾಲಯಗಳು, ಮಸೀದಿಗಳು, ಗುರುದ್ವಾರ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಆದರೆ, ಬಿಜೆಪಿಗೆ ಇದು ಇಷ್ಟವಾಗುತ್ತಿಲ್ಲ. ಹಿಂದು ಎಂಬುದರ ಅರ್ಥ ಅವರಿಗೆ ತಿಳಿದಿಲ್ಲ. ಹಿಂದು ಎಂದರೆ ಅದೊಂದು ದೃಷ್ಟಿಕೊನ. ನಮ್ಮೊಂದಿಗೆ ಜೀವನದುದ್ದಕ್ಕೂ ಸಾಗುವ ವಿಚಾರವಾಗಿದೆ.
ಮೋದಿಯವರು ತಮ್ಮೊಳಗೇ ಕೋಪಗೋಳ್ಳುತ್ತಾರೆ. ಪ್ರತೀಯೊಬ್ಬರ ಮೇಲೆ ಕೋಪ ಮಾಡಿಕೊಳ್ಳುತ್ತಿರುತ್ತಾರೆ, ಆದರೆ, ನನ್ನ ಮೇಲೆ ಮಾತ್ರ ಕೋಪ ಮಾಡಿಕೊಳ್ಳುವುದಿಲ್ಲ. ಕೋಪಕ್ಕೆ ನಾನು ಹೊಳೆಯುವ ಕಬ್ಬಿಣವಿದ್ದಂತೆ. ಕೋಪವನ್ನು ಆಕರ್ಷಿಸುತ್ತೇನೆ. ಇದೇ ಅವರ ಸಮಸ್ಯೆಯಾಗಿದೆ. ಆದರೆ, ಅದು ನನ್ನ ಸಮಸ್ಯೆಯಲ್ಲ. ಮೋದಿ ಬಾಯಿಂದ ಬರುವುದೆಲ್ಲಾ ಅವರ ಹೃದಯದಿಂದ ಬರುವ ಮಾತು. ಇದೀಗ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರು ಹೇಳುತ್ತಿರುವುದು ಸರಿಯಿದೆ. ಕರ್ನಾಟಕ, ಛತ್ತೀಸ್ಗಢ, ಮಧ್ಯಪ್ರದೇಶ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಬಿಜೆಪಿ ಸೋಲು ಕಾಣಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿಯೂ ಸೋಲು ಕಾಣಲಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿಗೆ ಸವಾಲು
ಕರ್ನಾಟಕದ ರಾಜ್ಯದ ಸಾಧನೆಗಳ ಬಗ್ಗೆ 15 ನಿಮಿಷ ನಿಮ್ಮ ತಾಯಿ ಭಾಷೆ ಅಥವಾ ಇತರೆ ನಿಮಗೆ ಅನುಕೂಲವಾಗುವ ಯಾವುದೇ ಭಾಷೆಯಲ್ಲಿ ಮಾತನಾಡಿ ಎಂದು ಸವಾಲು ಹಾಕಿದ್ದ ಪ್ರಧಾನಿ ಮೋದಿಯವರಿಗೆ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.
ಪರೋಕ್ಷವಾಗಿ ಸೋನಿಯಾ ಅವರು ಇಟಲಿ ಮೂಲದವರು ಎಂದು ಹೇಳಿದ್ದ ಮೋದಿಯವರಿಗೆ ಅತ್ಯಂತ ಜಾಗರೂಕವಾಗಿಯೇ ಟಾಂಗ್ ನೀಡಿರುವ ರಾಹುಲ್, ಬಹಳಷ್ಟು ಭಾರತೀಯರಿಗಿಂತ ನನ್ನ ತಾಯಿ ಹೆಚ್ಚಿನ ಭಾರತೀಯರಾಗಿದ್ದಾರೆ. ಇದನ್ನು ಎಲ್ಲಾ ಭಾರತೀಯರೂ ನೋಡಿದ್ದಾರೆ. ನನ್ನ ತಾಯಿ ಇಟಾಲಿಯನ್ ಅದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ಆಧರೆ, ಅಲ್ಲಿ ಹುಟ್ಟಿ ಬೆಳೆದಿದ್ದಕ್ಕಿಂತಲೂ ಹೆಚ್ಚಿನ ಅವಧಿಯನ್ನು ಅವರು ಭಾರತದಲ್ಲಿಯೇ ಕಳೆದಿದ್ದಾರೆ. ಈ ದೇಶಕ್ಕಾಗಿ ಹೆಚ್ಚಿನ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಸಾಕಷ್ಟು ಅನುಭವಿಸಿದ್ದಾರೆ.
ಸೋನಿಯಾ ಅವರನ್ನು ನಿಂದಿಸುವುದನ್ನು ಮೋದಿಯವರು ಇಷ್ಟಪಟ್ಟರೆ ಅದನ್ನು ಅವರು ಮಾಡಬಹುದು. ಇದು ಪ್ರಧಾನಮಂತ್ರಿಗಳ ಗುಣಮಟ್ಟತೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics