ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟ ಗೆಲವು ಸಾಧಿಸುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ಕಾಂಗ್ರೆಸ್ ಮುಖಂಡ, ಕಾಂಗ್ರೆಸ್ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ಅವರು ಶನಿವಾರ ಹೇಳಿದ್ದಾರೆ.
ವಿಶ್ವಾಸಮತಯಾಚನೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಂಘ್ವಿಯವರು, ಪಾರದರ್ಶಕತೆ ಪ್ರದರ್ಶನ ಅತ್ಯಂತ ಪ್ರಮುಖವಾದದ್ದು. ಸದನದ ಕಲಾಪವನ್ನು ನೇರ ಪ್ರಸಾರ ಮಾಡುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಆದೇಶಿಸಿದ್ದಾರೆ. ನ್ಯಾಯ ದೊರಕುವ ವಿಶ್ವಾಸ ಹಾಗೂ ನಂಬಿಕೆಯಿದೆ. ವಿಶ್ವಾಸಮತಯಾಚನೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆಲುವು ಸಾಧಿಸುವ ಕುರಿತು ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ.
ಭಾರೀ ಹೈಡ್ರಾಮಗಳಿಗೆ ಸಾಕ್ಷಿಯಾಗಿರುವ ಕರ್ನಾಟಕದಲ್ಲಿನ ಹೊಸ ಸರ್ಕಾರ ರಚನೆಯ ಕಸರತ್ತಿಗೆ ಈಗ ಹೊಸ ತಿರುವು ಸಿಕ್ಕಿದೆ. ಬಹುಮತ ಸಾಬೀತಿಗೆ ರಾಜ್ಯಪಾಲರಿಂದ 15 ದಿನಗಳ ಕಾಲಾವಕಾಶ ಪಡೆದುಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್, ಇಂದು ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವ ತಾಕೀತು ಮಾಡಿದೆ. ಜೊತೆಗೆ ಇದಕ್ಕೆ ಮುಂಚಿತವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ದೇಶನವನ್ನೂ ನೀಡಿದೆ.