ರಾಜಕೀಯ

ಹೆಚ್ ಡಿ ರೇವಣ್ಣ ಬದುಕಿರುವವರೆಗೂ ಶಾಸಕರಾಗಿರುತ್ತಾರೆ: ಸಚಿವೆ ಜಯಮಾಲಾ

Sumana Upadhyaya

ಶ್ರವಣಬೆಳಗೊಳ: ಲೋಕೋಪಯೋಗಿ ಇಲಾಖೆ ಸಚಿವ ಹೆಚ್ ಡಿ ರೇವಣ್ಣ ಬದುಕಿರುವವರೆಗೂ ಶಾಸಕರಾಗಿರುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಪರ ಮಾತನಾಡುವ ಮೂಲಕ ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ, ಮುಜುಗರ ಉಂಟುಮಾಡಿದ್ದಾರೆ.

ನಿನ್ನೆ ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ ನಡೆದ ಮುನಿ ಚಾರುಕೀರ್ತ ಭಟ್ಟಾರಕ ಸ್ವಾಮಿಗೆ ಭಗವಾನ್ ಮಹಾವೀರ ಶಾಂತಿ ಪುರಸ್ಕಾರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವ ರೇವಣ್ಣ ಹಾಸನ ಜಿಲ್ಲೆಯ ಜನತೆಗೆ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ, ಅದು ಇಲ್ಲಿಗೆ ಬಂದು ನೋಡಿದರೆ ಗೊತ್ತಾಗುತ್ತದೆ, ಅವರು ಅನೇಕ ಉತ್ತಮ ಕೆಲಸಗಳನ್ನು ಮಾಡಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದಾರೆ ಎಂದು ಹಾಡಿಹೊಗಳಿದ್ದಾರೆ.

ಅದು ಸರ್ಕಾರದ ಕೆಲಸವಾಗಿರಲಿ, ಕ್ಷೇತ್ರದ ಜನತೆಯ ಕೆಲಸವಾಗಿರಲಿ ಸಚಿವ ರೇವಣ್ಣನವರು ಉತ್ತಮ ಕೆಲಸ ಮಾಡುತ್ತಾರೆ. ತಮ್ಮ ಕ್ಷೇತ್ರಗಳಲ್ಲಿ ಸ್ವಚ್ಛತೆಗೆ, ಕುಡಿಯುವ ನೀರು, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ, ಅವರ ಕೆಲಸವೇ ಇಂದು ಅವರನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಅವರಿಗೆ ಮಹಿಳೆಯರು, ಮಕ್ಕಳ ಬಗ್ಗೆಯೂ ವಿಶೇಷ ಅನುಭೂತಿಯಿದೆ ಎಂದರು.

ರೇವಣ್ಣನವರು ತಮಗೆ ಸಂಬಂಧಪಡದ ಬೇರೆ ಇಲಾಖೆಗಳ ವಿಚಾರಗಳಲ್ಲಿ ಸಹ ಮೂಗು ತೂರಿಸುತ್ತಾರೆ ಎಂಬ ಕೆಲ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಚಿವೆ ಜಯಮಾಲಾ ಟಾಂಗ್ ಕೊಟ್ಟಂತಿದೆ ಅವರ ಈ ಮಾತು. ಕಾರ್ಯಕ್ರಮದಲ್ಲಿ ಸ್ವತಃ ಹೆಚ್ ಡಿ ರೇವಣ್ಣ ಕೂಡ ಉಪಸ್ಥಿತರಿದ್ದರು. ಸಚಿವೆ ಜಯಮಾಲಾ ಹೇಳಿಕೆ ಮುಂದಿನ ದಿನಗಳಲ್ಲಿ ವಿವಾದ, ಭಿನ್ನಾಭಿಪ್ರಾಯ ಹುಟ್ಟುಹಾಕುವ ಸಾಧ್ಯತೆಯಿದೆ.

ಸರ್ಕಾರದ ಸನ್ಮಾನ ಸ್ವೀಕರಿಸಿ ಮಾತನಾಡಿದ ಚಾರುಕೀರ್ತಿ ಭಟ್ಟಾಚಾರ್ಯ, ಸಮಾಜದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಇನ್ನಷ್ಟು ಕೆಲಸಗಳಾಗಬೇಕಿದೆ. ಈ ಪ್ರಶಸ್ತಿ ಮೂಲಕ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಶಾಂತಿ ಸ್ಥಾಪನೆಗೆ ನನಗೆ ಸಿಕ್ಕಿದ 10 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಲಾಗುವುದು ಎಂದರು.

SCROLL FOR NEXT