ರಾಹುಲ್ ಗಾಂಧಿ - ಸುನೀಲ್ ಕುಮಾರ್
ಬೆಂಗಳೂರು: ಇತ್ತೀಚಿಗೆ ತಮ್ಮದು ದತ್ತಾತ್ರೇಯ ಗೋತ್ರ ಎಂದು ಹೇಳಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಆಹ್ವಾನ ನೀಡಿದ್ದಾರೆ.
ದತ್ತಾತ್ರೇಯ ಗೋತ್ರದ ರಾಹುಲ್ ಗಾಂಧಿಯವರಿಗೆ ಡಿಸೆಂಬರ್ 22ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತ ಜಯಂತಿಗೆ ಆಹ್ವಾನ ಎಂದು ಟ್ವೀಟ್ ಮಾಡಿರುವ ಸುನೀಲ್ ಕುಮಾರ್ ಅವರು, ರಾಹುಲ್ ಗಾಂಧಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ವಿಡಿಯೋವೊಂದರಲ್ಲಿ ನಿಮ್ಮ ಗೋತ್ರವನ್ನು 40 ವರ್ಷದ ನಂತರ ಪ್ರಕಟ ಮಾಡಿದ್ದೀರಿ. ದತ್ತ ಜಯಂತಿಯಲ್ಲಿ ಮಾಲಾಧಾರಿಯಾಗಿ ಬಂದು ನಮ್ಮೊಂದಿಗೆ ಪಾಲ್ಗೊಳ್ಳಿ. ಅಲ್ಲಿರುವ ಅನೇಕ ಸಮಸ್ಯೆಗಳಿಗೆ ಸಾಕ್ಷಿಯಾಗಿ, ಅವುಗಳನ್ನು ಪರಿಹರಿಸುವ. ದತ್ತ ಜಯಂತಿಗೆ ಸ್ವಾಗತವನ್ನು ಬಯಸುತ್ತೇನೆ ಎಂದಿದ್ದಾರೆ.