ಬೆಂಗಳೂರು: ಉಪಚುನಾವಣೆಯ ಹೊಸ್ತಿಲಿನಲ್ಲಿರುವಾಗಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನಕ್ಕೆ ಬಿಎಸ್'ಪಿ ಪಕ್ಷದ ಎನ್.ಮಹೇಶ್ ಅವರು ದಿಢೀರ್ ರಾಜೀನಾಮೆ ನೀಡಿದ್ದು, ಇದೀಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ತಲ್ಲಣ ಆರಂಭವಾಗಿದೆ.
ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಛಾನದಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಬಹುಜನ ಸಮಾಜ ಪಕ್ಷ ಹಿಂಪಡೆದ ಬೆನ್ನಲ್ಲೇ ರಾಜ್ಯದಲ್ಲಿ ಆ ಪಕ್ಷದ ಶಾಸಕರಾಗಿ ಸಮ್ಮಿಶ್ರ ಸರ್ಕಾರದಲ್ಲಿ ಪಾಲ್ಗೊಂಡಿದ್ದ ಮಹೇಶ್ ಅವರು ಅಂತಹುದೇ ನಿರ್ಧಾರವನ್ನು ಕೈಗೊಂಡಿರುವುದು, ಇದೀಗ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಚುನಾವಣಾ ಯೋಜನೆಗಳ ಮೇಲೆ ಭಾರೀ ಹೊಡೆತ ನೀಡಿದಂತಾಗಿದೆ.
ಕಾಂಗ್ರೆಸ್ ಜೊತೆಗಿನ ಮೈತ್ರಿ ಮಾಡಿಕೊಂಡಿರುವ ಸರ್ಕಾರದಲ್ಲಿ ಇರುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಬಿಎಸ್'ಪಿ ಅಧಿನಾಯಕಿ ಮಾಯಾವತಿಯವರ ಸೂಚನೆಯ ಮೇರೆಗೆ ಆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಮಹೇಶ್ ರಾಜೀನಾಮೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಮುಖ್ಯಮಂತ್ರಿಗಳು ರಾಜೀನಾಮೆ ಪತ್ರವನ್ನು ಇನ್ನೂ ಅಂಗೀಕಾರಕ್ಕಾಗಿ ರಾಜ್ಯಪಾಲರಿಗೆ ರವಾನಿಸಿಲ್ಲ.