ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ
ಶಿವಮೊಗ್ಗ: ಬಂಗಾರಪ್ಪ ಸಹೋದರರ ನಡುವಿನ ವೈಷಮ್ಯ ಇನ್ನೂ ರಹಸ್ಯವಾಗಿಯೇ ಉಳಿದಿದೆ, ಸದ್ಯ ನಡೆಯುತ್ತಿರುವ ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯಲ್ಲಿ ಬಂಗಾರಪ್ಪ ಬ್ರದರ್ಸ್ ಹೋರಾಟ ಜೋರಾಗಿಯೇ ಇದೆ. ಸೊರಬ ಶಾಸಕ ಹಾಗೂ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಈಡಿಗ ಸಮುದಾಯವಿರುವ ಪ್ರದೇಶಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ, ಬಿ.ಎಸ್ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಸ್ಪರ್ಧಿಸಿರುವ ಮಧು ಬಂಗಾರಪ್ಪ ಸೋಲಿಸಲು ಕುಮಾರ್ ಕಾರ್ಯತಂತ್ರ ಹೆಣೆದಿದ್ದಾರೆ.
ಮಾಜಿ ಸಿಎಂ ಬಂಗಾರಪ್ಪ 2004 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದಾಗಿನಿಂದ ಸಹೋದರರ ನಡುವೆ ಮೂಡಿದ ವೈರತ್ವ ಇನ್ನೂ ಕಡಿಮೆಯಾಗಿಲ್ಲ, ಬಂಗಾರಪ್ಪ ಜೊತೆ ಮಧು ಮತ್ತು ಕುಮಾರ್ ಇಬ್ಬರು ಬಿಜೆಪಿ ಸೇರಿದ್ದರು, ಆ ವೇಳೆ ಪಕ್ಷದ ಟಿಕೆಟ್ ಅನ್ನು ಬಂಗಾರಪ್ಪ ಮಧುಗೆ ಕೊಡಿಸಿದ್ದರು, ಇದರಿಂದ ಆಕ್ರೋಶ ಗೊಂಡ ಕುಮಾರ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಮರುಸೇರ್ಪಡೆಯಾಗಿದ್ದರು, ಎಸ್, ಬಂಗಾರಪ್ಪ ಏಳು ಬಾರಿ ಸೊರಬ ಕ್ಷೇತ್ರದಿಂದ ಆರಿಸಿ ಶಾಸಕರಾಗಿದ್ದರು. ಆದರೆ 2004 ರಲ್ಲಿ ಮಧು ಅವರಿಗೆ ಗೆಲುವು ತಂದುಕೊಡಲು ವಿಫಲಗಾಗಿದ್ದರು
ಎಸ್.ಎಂ ಕೃಷ್ಣ ಸರ್ಕಾರದ ಅವಧಿಯಲ್ಲಿ ಕುಮಾರ್ ಬಂಗಾರಪ್ಪ ಸಣ್ಣ ನೀರಾವರಿ ಸಚಿವರಾಗಿದ್ದರು. 2004 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕುಮಾರ್ ಮಧು ವಿರುದ್ಧ ಗೆಲವು ಸಾಧಿಸಿದ್ದರು.ಆದರೆ 2008ರ ಚುನಾವಣೆಯಲ್ಲಿ ಮಧು ಮತ್ತು ಕುಮಾರ್ ಇಬ್ಬರು ಹರತಾಳು ಹಾಲಪ್ಪ ವಿರುದ್ದ ಸೋಲನ್ನಪ್ಪಿದರು. ಆದರೆ ಮಧು ಗಿಂತ ಕುಮಾರ್ ಹೆಚ್ಚು ಮತ ಪಡೆದಿದ್ದರು.
2013 ರಲ್ಲಿ ಮಧು ವಿರುದ್ಧ ಸ್ಪರ್ಧಿಸಿದ್ದ ಕುಮಾರ್ ಬಂಗಾರಪ್ಪ ಸೋಲನುಭಸಿದ್ದರು. ಆದರೆ 2018ರ ಚುನಾವಣೆಯಲ್ಲಿ ಮಧು ವಿರುದ್ಧ ಕುಮಾರ್ ಗೆಲುವು ಸಾಧಿಸಿದ್ದರು.2011 ರಲ್ಲಿ ಬಂಗಾರಪ್ಪ ನಿಧನರಾದಾಗ ಅವರ ಅಂತ್ಯ ಸಂಸ್ಕಾರಕ್ಕೆ ಕುಮಾರ್ ಬಂಗಾರಪ್ಪ ಅವರಿಗೆ ಮಧು ಅವಕಾಶ ಕೊಟ್ಟಿರಲಿಲ್ಲ, ಜೊತೆಗೆ 2014ರ ಲೋಕಸಭೆ ಚುನಾವಣೆ ವೇಳೆ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ಮಾಡಲು ಮಧು ತನ್ನ ತಾಯಿಯನ್ನು ಕರೆತಂದಿದ್ದಕ್ಕೆ ಕುಮಾರ್ ಬಂಗಾರಪ್ಪ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು.
ಬಂಗಾರಪ್ಪ ಬ್ರದರ್ಸ್ ವೈರತ್ವ ಇನ್ನೂ ಕಡಿಮೆಯಾದ ಲಕ್ಷಣ ಕಂಡು ಬಂದಿಲ್ಲ, ಹೀಗಾಗಿ ಲೋಕಸಭೆ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಸೋಲಿಸಲು ಕುಮಾರ್ ಮುಂದಾಗಿದ್ದಾರೆ, ಬಿ.ವೈ ರಾಘವೇಂದ್ರ ಪರ ಪ್ರಚತಾರ ಮಾಡುತ್ತಿರುವ ಕುಮಾರ್ ಈಡಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಪ್ರಚಾರ ಕೈಗೊಂಡಿದ್ದಾರೆ,.ಹಣಕ್ಕಾಗಿ ಮಧು ಬಂಗಾರಪ್ಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ.