ಕಾಂಗ್ರೆಸ್ಸಿಗರು ಬಿಜೆಪಿ ಶಾಸಕರನ್ನು ಟಚ್ ಮಾಡೋಕ್ಕಾಗಲ್ಲ: ಶಾಸಕ ಆರ್ ಅಶೋಕ್
ಕಾಂಗ್ರೆಸ್ ತಲೆ ಕೆಳಗಾಗಿ ನಿಂತರೂ ಬಿಜೆಪಿ ಶಾಸಕರನ್ನು ಮುಟ್ಟುವುದಕ್ಕೆ ಆಗುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಶಾಸಕ ಆರ್ ಅಶೋಕ್ ಹೇಳಿದ್ದಾರೆ...
ಬೆಂಗಳೂರು: ಕಾಂಗ್ರೆಸ್ ತಲೆ ಕೆಳಗಾಗಿ ನಿಂತರೂ ಬಿಜೆಪಿ ಶಾಸಕರನ್ನು ಮುಟ್ಟುವುದಕ್ಕೆ ಆಗುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಶಾಸಕ ಆರ್ ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್ಸಿನವರು ಎಸಿಬಿ, ಆದಾಯ ತೆರಿಗೆ ಇಲಾಖೆ ಸೇರಿದಂತೆ ಯಾರಿಗೇ ದೂರು ಕೊಟ್ಟರೂ ನಮ್ಮದೇನು ಅಭ್ಯಂತರವಿಲ್ಲ. ಇದಕ್ಕೆಲ್ಲಾ ಬಿಜೆಪಿ ಹೆದರುವುದಿಲ್ಲ ಎಂದು ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್ ನ ಹಾದಿ ಬೀದಿ ಜಗಳ ಮೈತ್ರಿ ಸರ್ಕಾರ ತೊಡಕಾಗಿದೆ. ಆದರೆ ಮುಖ್ಯಮಂತ್ರಿ ಹೆಚ್ ಕುಮಾರಸ್ವಾಮಿ ಮಾತ್ರ ಅನಗತ್ಯವಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಹಿಟ್ ಅಂಡ್ ರನ್ ಕೇಸ್. ನಾವು ಸರ್ಕಾರ ಬೀಳಿಸುವ ಕೆಲಸ ಮಾಡುತ್ತಿಲ್ಲ ಎಂದರು.
ಮೈತ್ರಿ ಸರ್ಕಾರದ ಭಾಗವಾಗಿರುವ ಶಾಸಕರೇ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಮೊದಲು ನಿಮ್ಮ ಸರ್ಕಾರದ ಬಾಯಿ ಮುಚ್ಚಿಸಿ, ನಮ್ಮ ಬಾಯಿ ಮುಚ್ಚಿಸಲು ಯತ್ನಿಸಬೇಡಿ. ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಎಂದಾದರೂ ಸುಭದ್ರವಾಗಿದೆ ಎಂದು ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.