ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದಂಗೆ ಏಳಲು ಕರೆ ನೀಡಿದ್ದು, ಅವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಬೇಕು ಮತ್ತು ಈ ವಿಚಾರದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಗುರುವಾರ ಬಿಜೆಪಿ ಒತ್ತಾಯಿಸಿದೆ.
ಇಂದು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕರಾದ ಆರ್.ಅಶೋಕ್, ಬಿ.ಜೆ.ಪುಟ್ಟಸ್ವಾಮಿ, ಗೋವಿಂದ ಕಾರಜೋಳ ಹಾಗೂ ಇತರರ ಮುಖಂಡರು ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕಿಡಿ ಕಾರಿದರು.
ಸಿಎಂ ದಂಗೆ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ನ ಕೆಲ ಗೂಂಡಾಗಳು ಯಡಿಯೂರಪ್ಪ ಅವರ ಮನೆಗೆ ನುಗ್ಗಿ ಅವರ ಪ್ರಾಣ ತೆಗೆಯಲು ಮುಂದಾಗಿದ್ದರು. ಇದು ಸರ್ಕಾರದ ಪ್ರೇರಣೆಯಿಂದ ನಡೆದಿದೆ ಎಂದು ಆರೋಪಿಸಿದ ಆರ್ ಅಶೋಕ್, ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪೊಲೀಸರು ತಕ್ಷಣ ಸಿಎಂ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಆಪರೇಷನ್ ಕಮಲಕ್ಕೆ ಯಾವುದೇ ಯತ್ನ ಮಾಡಿಲ್ಲ. ನಾವು ಯಾರನ್ನೂ ಕರೆದಿಲ್ಲ. ಕಾಂಗ್ರೆಸ್ ಶಾಸಕರೇ ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದು ಆರ್ ಅಶೋಕ್ ಅವರು ತಿಳಿಸಿದರು.
ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ವಿರುದ್ಧದ ಹಗಣಗಳನ್ನು ಬಿಚ್ಚಿಟ್ಟ ಬಿಜೆಪಿ ನಾಯಕರು, ಚಿತ್ರದುರ್ಗದಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಅವಕಾಶ ನೀಡಿದ ಪ್ರಕರಣದಲ್ಲಿ ಎಚ್‌ಡಿಕೆ ಜಾಮೀನು ಪಡೆದಿದ್ದಾರೆ. ಅದಿರು ಕಳ್ಳಸಾಗಾಣಿಕೆಗೆ ಭೂಗತ ಪಾತಕಿಯೊಂದಿಗೆ ನಂಟು ಹೊಂದಿದ್ದಾರೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ಅವರು ಥಣಿಸಂದ್ರ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. 460 ಹೆಕ್ಟೇರ್ ಪ್ರದೇಶದಲ್ಲಿ ಆಕ್ರಮ ಗಣಿಗಾರಿಕೆ ಪ್ರಕರಣದಲ್ಲೂ ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ ಎಂದರು.
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎ ಮಂಜು ಆರೋಪಿಸಿರುವಂತೆ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ಭೂ ಕಬಳಿಕೆ ಮಾಡಿರುವುದು ನಿಜ. 54 ಎಕರೆ ಭೂಮಿ ಪ್ರಜ್ವಲ್ ಹೆಸರಲ್ಲಿ ರಿಜಿಸ್ಟ್ರಾರ್ ಆಗಿದೆ ಎಂದು ಹೇಳಿದರು.
ಇನ್ನು ರಾಮನಗರದ ಕ್ಯಾತಗಾನಹಳ್ಳಿಯಲ್ಲಿ ಎಸ್‌ಸಿ/ಎಸ್‌ಟಿಗೆ ಮೀಸಲಾಗಿದ್ದ 46 ಎಕರೆ ಭೂಮಿಯನ್ನು ಎಚ್‌ಡಿಕೆ ಕುಟುಂಬ ಕಬಳಿಸಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.