ಬೆಂಗಳೂರು: ಬೆಳಗಾವಿಯ ಜಾರಕಿಹೊಳಿ ಸಹೋದರರ ಅಸಮಾಧಾನವನ್ನು ಕಾಂಗ್ರೆಸ್ ಹೈ ಕಮಾಂಡ್ ಯಶಸ್ವಿಯಾಗಿ ಬಗೆಹರಿಸಿದೆ.
ತಮಿಳುನಾಡಿಗೆ ತೆರಳಿದ್ದ ಕಾಂಗ್ರೆಸ್ ಶಾಸಕರಾದ ಡಾ.ಸುಧಾಕರ್, ಎಂಟಿಬಿ ನಾಗರಾಜ್ ವಾಪಸ್ ಬೆಂಗಳೂರಿಗೆ ಆಗಮಿಸಿ ಪಕ್ಷವನ್ನು ಸಮರ್ಥಿಸಿಕೊಂಡಿದ್ದಾರೆ, ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸುಧಾಕರ್, ನಾನೊಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ರಾಜೀನಾಮೆ ನೀಡುವ ಉದ್ದೇಶವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಶಾಸಕ ಎಂಟಿಬಿ ನಾಗರಾಜ್ ಮತ್ತು ಡಿ.ಕೆ ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಜೊತೆ ಸಭೆ ನಡೆಸಿ, ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಾಗರಾಜ್ ಮುನಿಸಿಕೊಂಡಿದ್ದಾರೆ.
ಸ್ನೇಹಿತರೊಂದಿಗೆ ದೇವಾಸ್ಥಾನಕ್ಕೆ ತೆರಳುವುದು ರಾಜಕೀಯ ಪಿತೂರಿ ಎಂಬ ಹೇಳಿಕೆಗಳು ನಮಗೆ ತೀವ್ರ ಆಘಾತ ತಂದಿದೆ. ತಮಿಳುನಾಡಿಗೆ ಎಂಟಿಬಿ ನಾಗರಾಜ್ ಮತ್ತು ಮತ್ತಿತರರ ಸ್ನೇಹಿತರ ಜೊತೆಗೆ ದೇವಾಲಯಕ್ಕೆ ತೆರಳಿದ್ದೆವು. ಆದರೆ ಇದನ್ನು ಕೆಲ ಚಾನೆಲ್ ಗಳು ಇದನ್ನು ಆಪರೇಷನ್ ಕಮಲ ಎಂದು ಬಿಂಬಿಸುತ್ತಿವೆ. ನಾನು ಡಾಕ್ಟರ್, ಆದರೆ ಯಾವುದೇ ಆಪರೇಷನ್ ಕಾರ್ಯಗಳಲ್ಲಿ ಪಾಲ್ಗೊಳ್ಳಲ್ಲ. ನಾನು ಯಾವಾಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಕಾಂಗ್ರೆಸ್ ಪಕ್ಷದ ತತ್ವ ಆದರ್ಶ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಲ್ಲಿ ದೃಢ ನಂಬಿಕೆ ಹೊಂದಿರುವುದಾಗಿ ಅವರು ಹೇಳಿದ್ದಾರೆ.
ಹಲವು ಸಮಸ್ಯೆಗಳು ಇದ್ದದ್ದು ನಿಜ , ಅವೆಲ್ಲಾ ಬಗೆಹರಿದಿವೆ, ಎರಡು ಪಕ್ಷಗಳು ಸೇರಿ ಸರ್ಕಾರ ರಚಿಸಿರುವಾಗ ಎಲ್ಲಾ ಸಂಗತಿಗಳು ಮೃದುವಾಗಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲ, ಎರಡು ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ಸುಲಭವಾಗಿ ನಡೆಸಿಕೊಂಡು ಹೋಕಬೇಕಾಗಿರುವುದು ಮುಖ್ಯಮಂತ್ರಿಗಳ ಕರ್ತವ್ಯವಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.
ಶಿವಶಂಕರ್ ರೆಡ್ಡಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬಾರದೆಂಬ ಬೇಡಿಕೆ ಇನ್ನೂ ಈಡೇರಿಲ್ಲ, ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರ ಸ್ವಾಮಿ ಅವರು ತಮ್ಮನ್ನು ಮೂಲೆಗುಂಪು ಮಾಡಲಾಗಿದೆ ಎಂದು ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ, ನಾನು ಸಂನ್ಯಾಸಿಯಲ್ಲ, ರಾಜಕಾರಣಿ, ನಾನು ಮಂತ್ರಿಯಾಗಬೇಕೆಂದು ಬಯಸಿದ್ದೇನೆ ಎಂದು ನಾಗರಾಜ್ ಹೇಳಿದ್ದಾರೆ, ಎಲ್ಲಾ ಭಿನ್ನಮತಗಳು ಸರಿಯಾಗಿರುವ ಹಿನ್ನೆಲೆಯಲ್ಲಿ ಕಳೆದ ವಾರಕ್ಕಿಂತ ಕಾಂಗ್ರೆಸ್ ಈ ವಾರ ಹೆಚ್ಚು ಆತ್ಮ ವಿಶ್ವಾಸದಿಂದಿದೆ.