ರಾಜಕೀಯ

ರಾಜ್ಯದಲ್ಲಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ತೆರೆ, ಮುಂದಿನ ಟಾರ್ಗೆಟ್ ಚಿಂಚೋಳಿ, ಕುಂದಗೋಳ

Lingaraj Badiger
ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣಾ ಪ್ರಚಾಕ್ಕೂ ತೆರೆ ಬಿದ್ದಿದ್ದು, ರಾಜಕೀಯ ಪಕ್ಷಗಳ ಪ್ರಮುಖ ನಾಯಕರಿಗೆ ಈಗ ಉಪ ಚುನಾವಣೆಯ ಸವಾಲು ಎದುರಾಗಿದೆ. 
ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್ ಅವರ ರಾಜೀನಾಮೆಯಿಂದ ತೆರವಾದ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಹಾಗೂ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ಸಾವಿನಿಂದ ತೆರವಾಗಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರಕ್ಕೆ ಈಗಾಗಲೇ ಉಪ ಚುನಾವಣೆ ಘೋಷಣೆಯಾಗಿದ್ದು, ಮೇ 19ರಂದು ಮತದಾನ ನಡೆಯಲಿದೆ.
ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಎರಡೂ ಕ್ಷೇತ್ರಗಳ ಉಪ ಸಮರಕ್ಕೆ ಭರ್ಜರಿ ಸಿದ್ಧತೆ ನಡೆಸಿವೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ವಲ್ಯಾಪುರೆ ಅವರು ಕಾಂಗ್ರೆಸ್ ನ ಉಮೇಶ್ ಜಾಧವ್ ಅವರ ವಿರುದ್ಧ 19 ಸಾವಿರ ಮಂತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಇನ್ನು ಕುಂದಗೋಳದಲ್ಲಿ ಬಿಜೆಪಿಯ ಸಿಎಸ್ ಈಶ್ವರ್ ಗೌಡ ಅವರು ಸಿಎಸ್ ಶಿವಳ್ಳಿ ವಿರುದ್ಧ ಕೇವಲ 600 ಮತಗಳಿಂದ ಪರಾಭವಗೊಂಡಿದ್ದರು.
ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ನಿನ್ನೆ ತೆರೆ ಬಿದ್ದಿದ್ದು, ಇಂದು ಮನೆ ಮನೆ ಪ್ರಚಾರ ನಡೆಸುತ್ತಿರುವ ನಾಯಕರು, ಸ್ವಲ್ಪ ಬ್ರೇಕ್ ತೆಗೆದುಕೊಂಡು ಉಪ ಚುನಾವಣೆಯ ಪ್ರಚಾರ ನಡೆಸುವ ಸಾಧ್ಯತೆ ಇದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಇತರೆ ರಾಜ್ಯ ನಾಯಕರು, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ಜಿ ಪರಮೇಶ್ವರ ಅವರು ಮೇ 5ರ ನಂತರ ವಿಧಾನಸಭೆ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ.
ಬಿಜೆಪಿ ವಿಧಾನಸಭೆಯಲ್ಲಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡು, ಮೈತ್ರಿ ಸರ್ಕಾರದ ಸಂಖ್ಯಾಬಲ ಕುಗ್ಗಿಸಲು ಎಲ್ಲಾ ರೀತಿಯ ಯತ್ನ ನಡೆಸುತ್ತಿದೆ. ಈ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಬಿಜೆಪಿ ಸಂಖ್ಯಾಬಲ 106ಕ್ಕೆ ಏರಿಕೆಯಾಗಲಿದೆ.
SCROLL FOR NEXT