ಬೆಳಗಾವಿ: ಕಾಂಗ್ರೆಸ್ ನ ಬಂಡಾಯ ಶಾಸಕ ರಮೇಶ್ ಜಾರಕಿಹೋಳಿ ಬಿಜೆಪಿ ಸೇರ್ಪಡೆಯಾಗುವ ಕುರಿತು ತಮಗೆ ಯಾವುದೆ ಮಾಹಿತಿ ಇಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ನನಗೇನು ಗೊತ್ತಿಲ್ಲ. ಹಾಗಾಗಿ, ಈ ಬಗ್ಗೆ ನಾನೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಬಿಜೆಪಿ ಪಕ್ಷ ಸೇರ್ಪಡೆಯಾದ ಬಳಿಕ ಬೇಕಾದರೆ ಈ ಕುರಿತು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
ಮೊದಲು ನಿಮ್ಮ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಭಿನ್ನಭಿಪ್ರಾಯ ಉಂಟಾಗಿತ್ತು. ಇದೀಗ ಅವರು ಮತ್ತು ಅವರ ಸಹೋದರ ಸತೀಶ್ ಜಾರಕಿಹೊಳಿ ಅವರ ನಡುವೆ ಮನಸ್ತಾಪ ಉಂಟಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾಳ್ಕರ್, " ಈ ಬಗ್ಗೆ ಇದೀಗ ಏನು ಹೇಳಲು ಬಯಸುವುದಿಲ್ಲ. ಆದರೆ, ನನ್ನ ಹಿಂದಿನ ವಿಡಿಯೋಗಳನ್ನು ತೆಗೆದು ನೋಡಿ ಏನು ಅಂತಾ ನಿಮಗೆ ಅರ್ಥವಾಗಲಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.