ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ನರನಾಡಿಗಳಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಅವರ ಡಿಎನ್ಎ ಕೂಡಾ ಕಾಂಗ್ರೆಸ್ ಆಗಿದೆ ವೈಯಕ್ತಿಕ ನೋವಿನಿಂದಾಗಿ ಬಿಜೆಪಿ ಮಾತು ಕೇಳಿ ತಪ್ಪು ನಿರ್ಧಾರ ತೆಗೆದುಕೊಂಡರೆ ಮುಂದೆ ಅವರಿಗೆ ತೊಂದರೆಯಾಗಲಿದೆ ಎಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಚ್ಚರಿಕೆ ನೀಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಯಾವತ್ತು ಅನ್ಯಾಯ ಮಾಡಿಲ್ಲ. ಐದು ಬಾರಿ ಪಕ್ಷದಿಂದ ಶಾಸಕರಾಗಿರುವ ಅವರ ಕುರಿತು ಕೂಡ ಕಾಂಗ್ರೆಸ್ ನಲ್ಲಿ ನಕಾರಾತ್ಮಕ ಅಭಿಪ್ರಾಯ ಇಲ್ಲ. ಆದರೆ ಪ್ರಸ್ತುತ ಸಂದರ್ಭದಲ್ಲಿ ಅವರು ಎಚ್ಚರಿಕೆಯಿಂದ ಇರಬೇಕು. ಬಿಜೆಪಿಯವರ ಮಾತು ಕೇಳಿ ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುವುದಿಲ್ಲ. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಅವರಿಗೆ ಎಂದಿಗೂ ಅನ್ಯಾಯ ಮಾಡಿಲ್ಲ. ಮುಂದೆ ಕೂಡ ಗೌರವದಿಂದ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದರು.
ಅವರ ನೋವಿಗೆ ಪಕ್ಷ ಕಾರಣವಲ್ಲ. ಹಾಗಾಗಿ ಸಂಧಾನ ಮಾತುಕತೆಯ ಅಗತ್ಯ ಇಲ್ಲ. ವೈಯಕ್ತಿಕ ನೋವಿನಿಂದಾಗಿ ಕಾಂಗ್ರೆಸ್ ಬಿಡುವ ನಿರ್ಧಾರ ತೆಗೆದುಕೊಂಡರೆ ಅವರಿಗೇ ಕೆಡಕಾಗುತ್ತದೆ. ಬಿಜೆಪಿ ಮಾತು ಕೇಳದೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಮೇ 23ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ನಂತರ ಎಲ್ಲ ಸರಿ ಹೋಗುತ್ತದೆ. ಕೇಂದ್ರದಲ್ಲಿ ಯುಪಿಎ 3 ಅಧಿಕಾರಕ್ಕೆ ಬರಲಿದೆ. ರಾಜಕೀಯ ಬದಲಾವಣೆ ನಂತರ ರಾಜ್ಯದಲ್ಲಿ ಆಪರೆಷನ್ ಕಮಲ, ಕುದುರೆ ವ್ಯಾಪಾರ ಎಲ್ಲವೂ ನಿಲ್ಲುತ್ತದೆ. ಶಾಸಕರು ಪಕ್ಷ ಬಿಟ್ಟು ಹೋಗುವುದು, ಮತ್ತೆ ಬರುವುದಕ್ಕೂ ಸಹ ತಡೆ ಬೀಳುತ್ತದೆ ಎಂದು ಹೇಳಿದರು.
ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಜೊತೆಯಾಗಿಯೇ ಎದುರಿಸುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ಜೊತೆ ಈ ಬಗ್ಗೆ ಅಧಿಕೃತವಾಗಿ ಮಾತನಾಡುತ್ತೇನೆ. ನಾವು ಮಾತನಾಡುವ ಮೊದಲೇ ದೇವೇಗೌಡರು ಜೆಡಿಎಸ್ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿದ್ದಾರೆ. ಅವರಿಗೆ ಪಕ್ಷ ಅಭಾರಿಯಾಗಿದೆ ಎಂದರು.
ಚಿಂಚೋಳಿ ಕ್ಷೇತ್ರದಲ್ಲಿ ಉಮೇಶ್ ಜಾಧವ್ ಪಕ್ಷಕ್ಕೆ, ಮತದಾರರಿಗೆ ದ್ರೋಹ ಮಾಡಿದ್ದಾರೆ. ಲೋಕಸಭೆ ಚುನಸವಣೆಯಲ್ಲಿ ಸ್ಪರ್ಧಿಸಿರುವ ಅವರು ಸೋಲುತ್ತಾರೆ. ಚಿಂಚೋಳಿಯಲ್ಲೂ ಬಿಜೆಪಿ ಸೋಲಲಿದೆ. ಅನಂತರ ಕ್ಷೇತ್ರದಿಂದಲೇ ಜನ ಅವರನ್ನು ಹೊರ ಹಾಕುತ್ತಾರೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದರು.
ಚಿಂಚೋಳಿ, ಕುಂದಗೋಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಜಿಲ್ಲಾ ಮುಖಂಡರ ಜೊತೆ ಸಭೆ ನಡೆಸಲಾಗಿದೆ. ಇದಕ್ಕೂ ಮೊದಲು ಧಾರವಾಡದಲ್ಲಿ ಮತ್ತು ಗುಲ್ಬರ್ಗದಲ್ಲಿ ಸಭೆಗಳು ನಡೆದಿವೆ ಎಂದರು.
ಹೈಕಮಾಂಡ್ ಜೊತೆ ಚರ್ಚಿಸಿ ನಾಳೆ ಅಭ್ಯರ್ಥಿಗಳ ಯಾರು ಎಂಬುದನ್ನು ತಿರ್ಮಾನ ಮಾಡುತ್ತೇವೆ. ಎರಡು ಕಡೆ ಕ್ಷೇತ್ರಗಳಲ್ಲೂ ಉತ್ಸಾಹ ಇದೆ. ಕಾಂಗ್ರೆಸ್ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಇಲ್ಲ. ಯಾರಿಗೆ ಟಿಕೆಟ್ ಕೊಟ್ಟರು ಗೆಲ್ಲಿಸುತ್ತೇವೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಗೆಲುವಿಗೆ ಅಗತ್ಯ ತಂತ್ರಗಾರಿಕೆ ರೂಪಿಸುತ್ತೇವೆ. ಗೆಲ್ಲುವ ಅಭ್ಯರ್ಥಿಗಳಿಗೆ ಮತ್ತು ಕಾರ್ಯಕರ್ತರ ಅಭಿಪ್ರಾಯ ಕೇಳಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos